ಎಲ್ಲದಕ್ಕಿಂತ ದೇಶ ಮುಖ್ಯ: ಮತಗಳ ಓಲೈಕೆ ರಾಜಕಾರಣ ಬಿಡಲಿ- ಕೇಂದ್ರ ಸಚಿವ ವಿ.ಸೋಮಣ್ಣ
ಮೈಸೂರು,ಸೆಪ್ಟಂಬರ್,13,2024 (www.justkannada.in): ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದೊಂದು ಸಣ್ಣ ಘಟನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಎಲ್ಲದಕ್ಕಿಂತ ದೇಶ ಮುಖ್ಯ. ಹೀಗಾಗಿ ಮತಗಳ ಓಲೈಕೆ ರಾಜಕಾರಣ ಬಿಡಬೇಕು ಎಂದು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ಚಾಮುಂಡಿ ತಾಯಿಯ ಆಶೀರ್ವಾದದಿಂದ ನನಗೆ ದೊಡ್ಡ ಸ್ಥಾನವೇ ಸಿಕ್ಕಿದೆ. ಜನರ ಜೊತೆ ಸದಾ ಇದ್ದರೆ ಜನರ ಪ್ರತಿಕ್ರಿಯೆ ಹಾಗೇ ಇರುತ್ತದೆ ಎಂಬುದಕ್ಕೆ ಮೈಸೂರಿನ ಇವತ್ತಿನ ಸ್ವಾಗತವೇ ಸಾಕ್ಷಿ. ಜನರ ಪ್ರೀತಿ ನೋಡಿ ನನಗೆ ಹೃದಯ ತುಂಬಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಗಮಂಗಲ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಯಾರೇ ತಪ್ಪು ಮಾಡಿದ್ದರೂ ಅವರು ಎಷ್ಟೇ ಪ್ರಭಾವಿಗಳಾಗಿದ್ದರು ಅವರ ಮೇಲೆ ಕ್ರಮ ಆಗಬೇಕು. ಗೃಹ ಸಚಿವರು ಬಹಳ ಹಿರಿಯರಿದ್ದಾರೆ, ಅನುಭವಿಗಳು.ಯಾವ ಕಾರಣಕ್ಕಾಗಿ ಇದನ್ನ ಸಣ್ಣ ಪ್ರಕರಣ ಎಂದು ನನಗೆ ಗೊತ್ತಾಗುತ್ತಿಲ್ಲ. ಮತಗಳ ಓಲೈಕೆ ರಾಜಕಾರಣ ಬಿಡಬೇಕು. ಎಲ್ಲದಕ್ಕಿಂತ ದೇಶ ಮುಖ್ಯ. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು. ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ. ಅದರ ಮೆರವಣಿಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.
ಮುಖ್ಯ ನ್ಯಾಯಾಧೀಶರು ಮತ್ತು ಪ್ರಧಾನಿಗಳು ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದ್ರೆ ತಪ್ಪೇನು..?
ಮುಖ್ಯ ನ್ಯಾಯಾಧೀಶರು ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರು ಗಣಪತಿ ಪೂಜೆಯಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಅದರಲ್ಲಿ ತಪ್ಪೇನಿದೆ ಹೇಳಿ. ಇಬ್ಬರು ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು.ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕಿತ್ತೀರಾ.? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಅವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಇದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದರು.
Key words: Nagamangala roit, Union Minister, V. Somanna, mysore