For the best experience, open
https://m.justkannada.in
on your mobile browser.

ನೈಪುಣ್ಯ ಶಾಲೆಯಲ್ಲಿ ಜಯಚಾಮರಾಜ ಒಡೆಯರ್‌ ಅವರ ಸ್ಮರಣೆ

10:32 AM Aug 10, 2024 IST | prashanth
ನೈಪುಣ್ಯ ಶಾಲೆಯಲ್ಲಿ ಜಯಚಾಮರಾಜ ಒಡೆಯರ್‌ ಅವರ ಸ್ಮರಣೆ

ಮೈಸೂರು,ಆಗಸ್ಟ್,10,2024 (www.justkannada.in): ಸ್ವತಂತ್ರ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಮ್ಮ ರಾಜಪ್ರಭುತ್ವ ತ್ಯಾಗ ಮಾಡಿದ ಮೊದಲ ರಾಜಮನೆತನ ಮೈಸೂರು ರಾಜ ಮನೆತನ. ಅಂದು ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ತಮ್ಮ ರಾಜತ್ವವನ್ನು ತೊರೆದು ಅಖಂಡ ಭಾರತದ ಅಸ್ತಿತ್ವಕ್ಕೆ ಮೈಸೂರು ಸಂಸ್ಥಾನವನ್ನು ಸಮರ್ಪಿಸಿದ ದಿನವನ್ನು ಕನಕದಾಸನಗರದ ನೈಪುಣ್ಯ ಸ್ಕೂಲ್ ಆಫ್ ಏಕ್ಸಲೆನ್ಸ್ ಸಂಸ್ಥೆಯಲ್ಲಿ ಸ್ಮರಿಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಶಾಲೆಯ ಅಧ್ಯಕ್ಷ ಆರ್. ರಘು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸ್ವಾತಂತ್ರ‍್ಯದ ಪರಿಕಲ್ಪನೆಯಲ್ಲಿ ಗಾಂಧೀಜಿ ಕಲ್ಪಿಸಿದ ರಾಮರಾಜ್ಯವನ್ನು ಅಕ್ಷರಶಃ ಮೈಸೂರು ಸಂಸ್ಥಾನದಲ್ಲಿ ನಿರ್ಮಿಸಿ, ಆಳಿದ ಮೈಸೂರು ರಾಜವಂಶಸ್ಥರು ಅದರಲ್ಲೂ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಬಳಿಕ ಮಾತನಾಡಿದ ರಘು ಕೌಟಿಲ್ಯ, ಪ್ರಜಾಪ್ರಭುತ್ವವನ್ನು ಅಕ್ಷರಶಃ ಗೌರವಿಸುತ್ತಿದ್ದ ರಾಜಮನೆತನದ ಪರಂಪರೆಯ ಸಂಕೇತವಾಗಿ ಜಯಚಾಮರಾಜ ಒಡೆಯರ್ ಅವರು ಭಾರತದೊಂದಿಗೆ ಸಂಸ್ಥಾನವನ್ನು ವಿಲೀನಗೊಳಿಸಿ ಭಾರತ ಗಣರಾಜ್ಯವಾಗಲು ಕೊಡುಗೆ ನೀಡಿದ ದೇಶದ ಪ್ರಪ್ರಥಮ ದೊರೆ ಎನಿಸಿಕೊಂಡರು. ಇಂಥಹ ಆದರ್ಶ ದೊರೆಗಳು ಈ ಭಾಗದಲ್ಲಿ ಆಡಳಿತ ನಡೆಸಿದ್ದು ಮೈಸೂರಿಗರ ಹೆಮ್ಮೆ ಎಂದು ಹೇಳಿದರು.

ಹಾಗೆಯೇ  ಸ್ವಾತಂತ್ರ‍್ಯ ದಿನಾಚರಣೆಗೆ ಮುನ್ನ ಆಗಸ್ಟ್ 9 ರಂದು ಜಯಚಾಮರಾಜ ಒಡೆಯರ್ ಅವರು ಪ್ರಜಾಪ್ರಭುತ್ವ ಮತ್ತು ಭಾರತ ನಿರ್ಮಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ದಿನವನ್ನು ಮೈಸೂರು ಭಾಗದಲ್ಲಿ ಗೌರವಿಸಿ, ಸ್ಮರಿಸಿ ಅವರ ಇತಿಹಾಸವನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂದು ರಘು ಕೌಟಿಲ್ಯ ಹೇಳಿದರು.

ಇದೇ ಸಂದರ್ಭದಲ್ಲಿ 'ಚಿಣ್ಣರ ಚಿತ್ತದಲ್ಲಿ ಭಾರತ 'ಎಂಬ ಪರಿಕಲ್ಪನೆಯಲ್ಲಿ ಆಗಸ್ಟ್ 15 ರ ಸ್ವತಂತ್ರ ದಿನಾಚರಣೆಯ ಸಡಗರದ ನೆನಪಿಗಾಗಿ ಚಿತ್ರಕಲಾ ಸ್ಪರ್ಧೆಯೊಂದನ್ನು ಏರ್ಪಡಿಸಿ ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಇತಿಹಾಸದ ಕುರಿತು ಜಾಗೃತಿ ಮಾಡಿಸಲು ಪ್ರೇರೇಪಿಸಲಾಯಿತು. ಚರ್ಚಾಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ಅರ್ಥಪೂರ್ಣವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಲು ಸಂಸ್ಥೆಯಲ್ಲಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್, ಪ್ರಾಂಶುಪಾಲೆ ಶಾಂತಿನಿ ಜೆರಾಲ್ಡ್, ಶಿಕ್ಷಣ ಸಂಯೋಜಕಿ ಭಾವನಾ ಶ್ರೀಕಾಂತ್ ಮತ್ತು ಪಿ.ಆರ್.ಒ ಅಶ್ವಿನಿ ಶಂಕರ್ ಅವರು ಉಪಸ್ಥಿತರಿದ್ದರು.

Key words: Naipunya School, Memory, Jayachamaraja Wodeyar

Tags :

.