ಹೊಸ ವರ್ಷಾಚರಣೆ: ಡಿ. 31 ರಂದು ತಡರಾತ್ರಿವರೆಗೆ ನಮ್ಮ ಮೆಟ್ರೋ ಸಂಚಾರ.
ಬೆಂಗಳೂರು,ಡಿಸೆಂಬರ್,29,2023(www.justkannada.in): ಹೊಸ ವರ್ಷಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದ್ದು, ಹೊಸ ವರ್ಷಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್ 31 ರಂದು ನಮ್ಮ ಮೆಟ್ರೋ ಸಂಚಾರವನ್ನ ಬಿಎಂಆರ್ ಸಿಎಲ್ ತಡರಾತ್ರಿ 2 ಗಂಟೆವರೆಗೆ ವಿಸ್ತರಿಸಿದೆ.
ರಾತ್ರಿ 11.30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿಸೆಂಬರ್ 31 ರಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲುಗಳು 15 ನಿಮಿಷಗಳ ಆವರ್ತನದಲ್ಲಿ ಸಂಚರಿಸಲಿವೆ.
ಇನ್ನು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಂಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಅಂದು ಮೆಟ್ರೋ ರೈಲು ಎಂಜಿ ರಸ್ತೆ ನಿಲ್ದಾಣದಲ್ಲಿ ನಿಲ್ಲಲ್ಲ. ಹೀಗಾಗಿ ವಿಸ್ತೃತ ರೈಲು ಸೇವೆಯನ್ನು ಬಳಸಲು ಮೆಟ್ರೋ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚಿಸಲಾಗಿದೆ.
ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಕರಿಗೆ 50 ರೂಪಾಯಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ ಟಿಕೆಟ್ ವಿತರಣೆ ಇರುವುದಿಲ್ಲವಾದ್ದರಿಂದ ಪೇಪರ್ ಟಿಕೆಟ್ ಗಳನ್ನು ಮುಂಚಿತವಾಗಿ ಪಡೆಯಬೇಕು. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Key words: New Year-Celebration-namma metro -night - 31st.