HomeBreaking NewsLatest NewsPoliticsSportsCrimeCinema

ಚಟುವಟಿಕೆ ನಡೆಸದ ಮುಡಾ ಸಿ.ಎ. ನಿವೇಶನ ರದ್ದು: ಮುಡಾ ಅಧ್ಯಕ್ಷ  ಕೆ. ಮರೀಗೌಡ ಎಚ್ಚರಿಕೆ

03:57 PM Jun 19, 2024 IST | prashanth

ಮೈಸೂರು, ಜೂ,19,2024 (www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿ.ಎ. ನಿವೇಶನಗಳನ್ನು ರಿಯಾಯಿತಿ ದರದಲ್ಲಿ 30 ವರ್ಷ, 90 ವರ್ಷಗಳಿಗೆ ಗುತ್ತಿಗೆ ಪಡೆದು ಆ ಜಾಗದಲ್ಲಿ ಯಾವುದೇ ಚಟುವಟಿಕೆ ನಡೆಸದ ಸಂಘ. ಸಂಸ್ಥೆ, ಟ್ರಸ್ಟ್‌ ಗಳ ನಿವೇಶನಗಳನ್ನು ರದ್ದು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷ ಮರೀಗೌಡ ಎಚ್ಚರಿಸಿದರು.

ಮುಡಾ ಆಯುಕ್ತರಾದ ಜಿ.ಟಿ. ದಿನೇಶ್‌ ಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸಿದ್ಧಾರ್ಥ ನಗರದಲ್ಲಿರುವ ಸಿ.ಐ.ಟಿ.ಬಿ. ಛತ್ರ  ಭರತ್‌ ನಗರ, ರಮ್ಮನಹಳ್ಳಿ. ಕಾಳಿಸಿದ್ದನಹುಂಡಿ, ಬನ್ನಿಮಂಟಪ, ಬೆಲವತ್ತ, ಶ್ಯಾದನಹಳ್ಳಿಗಳಿಗೆ ಭೇಟ ನೀಡಿ ಸ್ಥಳ ಪರಿಶೀಲಿಸಿದರು.

ನಂತರ ಮಾತನಾಡಿದ ಮುಡಾ ಅಧ್ಯಕ್ಷ ಮರೀಗೌಡ, ಕೋಟ್ಯಾಂತರ ಬೆಲೆ ಬಾಳುವ ಪ್ರಾಧಿಕಾರದ ನಿವೇಶನವನ್ನು ಗೋಕುಲಂನಲ್ಲಿ ಟಸ್ಟ್‌ ವೊ೦ದು (10 ಎಕರೆ 26 ಗುಂಟೆ) ಗುತ್ತಿಗೆ ಪಡೆದು ಹಲವು ವರ್ಷಗಳಾದರೂ ಆ ಜಾಗದಲ್ಲಿ ಏನು ಮಾಡಿಲ್ಲ. ಸಿದ್ಧಾರ್ಥ ಬಡಾವಣೆಯಲ್ಲಿ ವಿದ್ಯಾಶಂಕರ ಟ್ರಸ್ಟ್‌ ಸಹ ಗುತ್ತಿಗೆ ಪಡೆದ ಜಾಗ ಹಾಗೆಯೇ ಇದೆ. ಇಂತಹ ನಿವೇಶನಗಳನ್ನು ಸರ್ಕಾರದ ಗಮನಕ್ಕೆ ತಂದು ಯಾವುದೇ ಒತ್ತಡಕ್ಕೆ ಮಣಿಯದೇ ರದ್ದು ಮಾಡಿ ಪ್ರಾಧಿಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದ ಅವರು ಭರತನಗರದಲ್ಲಿ ಒಳಚರಂಡಿ ಸಮಸ್ಯೆ ಇದೆ.  ಪಟ್ಟಣ ಪಂಚಾಯ್ತಿ ಹಾಗೂ ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಸಿದ್ಧಾರ್ಥನಗರದಲ್ಲಿರುವ ಸಿ.ಐ.ಟಿ.ಬಿ. ಛತ್ರದ ಜಾಗ 1 ಎಕರೆ 17 ಗುಂಟೆ ಇದ್ದು ಈಗಿರುವ ಹಳೆ ಛತ್ರವನ್ನು ಒಡೆದು ಹಾಕಿ 5 ಕೋಟಿ ವೆಚ್ಚದಲ್ಲಿ ಅದೇ ಜಾಗದಲ್ಲಿ ಸುಸಜ್ಜಿತ ಛತ್ರ ನಿರ್ಮಿಸಲಾಗುವುದು. ಛತ್ರದ ಸುತ್ತ ಮಳಿಗೆಗಳನ್ನು ನಿರ್ಮಿಸಿ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಕ್ರಮಕೈಗೊಳ್ಳಲಾಗುವುದು. ರಮ್ಮನಹಳ್ಳಿಯಲ್ಲಿ ಒಳಚರಂಡಿ ಇದ್ದರೂ ಸಹ ಸೇಪ್ಟಿ ಟ್ಯಾಂಕ್‌ ಇಲ್ಲದೆ ತೊಂದರೆಯಾಗಿದೆ. 1 ಕೋಟಿ 70 ಲಕ್ಷ ರೂ. ವೆಚ್ಚದಲ್ಲಿ ಸೆಪ್ಟಿಕ್‌ ಟ್ಯಾಂಕ್‌ ನಿರ್ಮಿಸಲಾಗುವುದು. ವಾಲ್ಮೀಕಿ ಸಮುದಾಯ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಕ್ಕೆ ತಂದು ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು. ಕಾಳಿಸಿದ್ದನಹುಂಡಿ ಕೆರೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಡಾ ಎಸ್‌ ಇ ಧರಣೇಂದ್ರ, ಕಾರ್ಯದರ್ಶಿ ಶೇಖರ್‌, ಇಇ ನಾಗೇಶ್‌, ತಹಸೀಲ್ದಾರ್‌ ಮೋಹನಕುಮಾರಿ, ಟಿಪಿಎಂ ಶಿವರಾಂ, ಎಇಇ ಶಿವಣ್ಣ, ರೂಪಶ್ರೀ, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್‌, ಆಪ್ತ ಸಹಾಯಕ ಗಂಗಾಧರ್‌, ಮುಖಂಡರಾದ ಬಿ. ರವಿ, ಪ್ರಕಾಶ್‌, ಪೈ. ಶಿವಣ್ಣ. ಪೈ. ಚಿಕ್ಕೀರಿ, ನಾಗರಾಜ, ಜೈಸ್ಥಾಮಿ, ಚಿಕ್ಕಮಹಾದೇವ, ಮಹಾದೇವ, ಕೃಷ್ಣಪ್ಪ ಶಿವಣ್ಣ. ಕೃಷ್ಣ ಹಾಜರಿದ್ದರು.

Key words: Non-Active, Muda,  CA site,  K. Mari Gowda

Tags :
Non-Active –Muda- CA site- K. Mari Gowda
Next Article