ಆಸ್ತಿ ಕಬಳಿಸಲು ಸತ್ತ ಮಹಿಳೆಯನ್ನ ಬದುಕಿಸಿದ ಅಧಿಕಾರಿಗಳು: ಕಾನೂನು ಸಮರಕ್ಕೆ ಮುಂದಾದ ಕುಟುಂಬ
ಮೈಸೂರು,ಸೆಪ್ಟಂಬರ್,13,2024 (www.justkannada.in): ಸತ್ತ ಮಹಿಳೆ ಹೆಸರಲ್ಲಿದ್ದ ಆಸ್ತಿ ಕಬಳಿಸಲು ನಕಲಿ ದಾಖಲೆ ಸೃಷ್ಠಿಸಿ ಭೂ ಕಬಳಿಕೆ ಯತ್ನಿಸಿದ ಅಧಿಕಾರಿಗಳ ಯಡವಟ್ಟು ಇದೀಗ ಬಯಲಾಗಿದೆ.
ಆಸ್ತಿ ಕಬಳಿಸಲು ಸಬ್ ರಿಜಿಸ್ಟರ್, ಗ್ರಾಮಲೆಕ್ಕಿಗ ಖಾಸಗಿ ವ್ಯಕ್ತಿಗಳ ಜೊತೆ ಶಾಮೀಲಾಗಿ ಸುಳ್ಳು ದಾಖಲೆ ಸೃಷ್ಠಿಸಿ ಸತ್ತ ಮಹಿಳೆಯನ್ನೇ ಬದುಕಿಸಿದ್ದಾರೆ. ಹೌದು, 2021 ರಲ್ಲಿ ಮೃತಪಟ್ಟ ಮಹಿಳೆ 2024 ರಲ್ಲಿ ದಾಖಲೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕು ಗೊಲ್ಲನಬೀಡು ಸರಗೂರು ಗ್ರಾಮದ ಮಹಿಳೆ ಸರೋಜಮ್ಮ ಎಂಬುವವರು ಕೋವಿಡ್ ಸಂದರ್ಭದಲ್ಲಿ ಅಂದರೆ 2021 ರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಸರ್ಕಾರದ ಪರಿಹಾರವನ್ನೂ ಪಡೆದಿದೆ.
ಈ ಮಧ್ಯೆ ಸರೋಜಮ್ಮನ ಹೆಸರಿನಲ್ಲಿ ಮೂರು ಎಕರೆ ಜಮೀನಿದ್ದು ಈ ಜಮೀನು ಕಬಳಿಸಲು ಗ್ರಾಪಂ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ ಶಾಮೀಲಾಗಿ ಅದೇ ಹೆಸರಿನ ಹಾಗೂ ಆಕೆಯ ಪತಿಯ ಹೆಸರಿನ ಅನಾಮಧೇಯ ವ್ಯಕ್ತಿಗಳನ್ನ ಸೃಷ್ಠಿಸಿದ್ದಾರೆ. ಅಸಲಿಗೆ ಸರೋಜಮ್ಮ ಪತಿ ನಿಧನರಾಗಿ ಮೂವತ್ತು ವರ್ಷ ಕಳೆದಿದೆ. ಆದರೆ ಮಂಡ್ಯ ಜಿಲ್ಲೆ ಕೆರೆಗೋಡು ಹೋಬಳಿ ಬಿ.ಹೊಸೂರು ಗ್ರಾಮದ ಮಹಿಳೆಯನ್ನ ಸರೋಜಮ್ಮ ಎಂದು ಹೆಸರು ಸೃಷ್ಠಿಸಿದ್ದಾರೆ. ಮೃತ ಮಹಿಳೆ ಹೆಸರಿನಲ್ಲಿ ಸರೋಜಮ್ಮ ಎಂಬ ಮಹಿಳೆ ತನ್ನ ಮಗನ ಹೆಸರಿಗೆ ಖಾತೆ ಮಾಡಿಕೊಟ್ಟಿರುವ ದಾಖಲೆಯಲ್ಲಿ ಸಾಕ್ಷಿಗೆ ಮೃತ ವ್ಯಕ್ತಿ ಸಣ್ಣಹೈದೇಗೌಡ ಸಹಿ ಹಾಕಿದ್ದಾರೆ
ಸರೋಜಮ್ಮ ಎಂಬಾಕೆ ಹಾಗು ಆಕೆಯ ಪುತ್ರ ಎಚ್.ಎಸ್.ವಿಜಯಕುಮಾರ್ ಎಂಬವರು ಈ ದಾಖಲೆಗೆ ಸಹಿ ಹಾಕಿದ್ದು, ಇಬ್ಬರು ಸೇರಿ ಮತ್ತೊಬ್ಬ ಪುತ್ರ ಎಚ್.ಎಸ್.ಚಂದ್ರು ಹೆಸರಿಗೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ಅಸಲಿಗೆ ಜಮೀನು ಮಾಲಕಿ ಮೃತ ಸರೋಜಮ್ಮ ಎಂಬಾಕೆಗೆ ಇಬ್ಬರು ಗಂಡು ಮಕ್ಕಳೇ ಇಲ್ಲ. ಡೆತ್ ಸರ್ಟಿಫಿಕೇಟ್ ಸಮೇತ ಗ್ರಾಪಂ ಅಧಿಕಾರಿಗಳಿಗೆ ದಾಖಲೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದು, ಈ ಬಗ್ಗೆ ಕೇಳಿದರೇ ಗ್ರಾಮ ಪಂಚಾಯಿತಿ ಲೆಕ್ಕಿಗ ತ್ರಿಶೂಲ್ ಎಂಬಾತ ಉಡಾಫೆ ಉತ್ತರ ನೀಡಿದ್ದಾರೆ.
ಈ ಮಧ್ಯೆ ಸಬ್ ರಿಜಿಸ್ಟರ್ ಯಡವಟ್ಟಿಗೆ ಪೊಲೀಸರು ಸಹ ಸಾಥ್ ನೀಡುತ್ತಿದ್ದು, ನಕಲಿ ವ್ಯಕ್ತಿಗಳ ವಿರುದ್ಧ ದೂರು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೃತ ಸರೋಜಮ್ಮನ ಮಗಳು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದು, ನಕಲಿ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಕೋರ್ಟಿಗೆ ಹೋದರೆ ಸಿವಿಲ್ ಮ್ಯಾಟರ್ ಅಂತ ವರ್ಷಗಟ್ಟಲೆ ಕೇಸ್ ನಡೆಸಬೇಕಾದ ಆತಂಕ ಇದೀಗ ಸರೋಜಮ್ಮ ಕುಟುಂಬಕ್ಕೆ ಎದುರಾಗಿದೆ. ಹೀಗಾಗಿ ತಮ್ಮ ಆಸ್ತಿಯನ್ನ ವಾಪಸ್ ಕೊಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದು, ಅಧಿಕಾರಿಗಳ ಯಡವಟ್ಟು ವಿರುದ್ಧ ಮೃತ ಸರೋಜಮ್ಮ ಅವರ ಕುಟುಂಬ ಕಾನೂನು ಸಮರಕ್ಕೆ ಮುಂದಾಗಿದೆ.
Key words: Officers, property, Expropriation, Family, mysore