For the best experience, open
https://m.justkannada.in
on your mobile browser.

ಮೋದಿ ಅವಧಿಯಲ್ಲೇ‌ ಅತಿ‌ ಹೆಚ್ವು ತೈಲ ಬೆಲೆ ಏರಿಕೆ: ಬಿಜೆಪಿ ಪ್ರತಿಭಟನೆ ಬರೀ‌ ನಾಟಕ- ಸಚಿವ ಎಂ‌.ಬಿ ಪಾಟೀಲ್

02:57 PM Jun 18, 2024 IST | prashanth
ಮೋದಿ ಅವಧಿಯಲ್ಲೇ‌ ಅತಿ‌ ಹೆಚ್ವು ತೈಲ ಬೆಲೆ ಏರಿಕೆ  ಬಿಜೆಪಿ ಪ್ರತಿಭಟನೆ ಬರೀ‌ ನಾಟಕ  ಸಚಿವ ಎಂ‌ ಬಿ ಪಾಟೀಲ್

ಬೆಂಗಳೂರು,ಜೂನ್,18,2024 (www.justkannada.in):  ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯನ್ನು ನಾವು ಕೇವಲ ಮೂರು ರೂ. ಏರಿಸಿದ್ದೇವೆ ಅಷ್ಟೇ.‌ ಮೋದಿ ಅಧಿಕಾರಕ್ಕೆ ಬಂದ ನಂತರ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್‌ ‌ಬೆಲೆಗಳು ಕ್ರಮವಾಗಿ 400, 38 ಮತ್ತು 35 ರೂ. ದುಬಾರಿ ಆಗಿದೆ. ಆಗ ತೆಪ್ಪಗಿದ್ದ ಬಿಜೆಪಿಯ ಅಶೋಕ್ ಮತ್ತು ವಿಜಯೇಂದ್ರ ಗ್ಯಾಂಗ್ ಈಗ  ಪ್ರತಿಭಟಿಸುತ್ತಿರುವುದು ಬರೀ ನಾಟಕ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಎದಿರೇಟು ನೀಡಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಬಿಜೆಪಿ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ನಮಗಿಂತ ಜಾಸ್ತಿ ಇದೆ. ಬಿಜೆಪಿ ಅಲ್ಲೇಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಈಗಿನ ಬೆಲೆ ಏರಿಕೆಗೂ ಸಂಬಂಧ ಇಲ್ಲ. ಜೊತೆಗೆ ನಾವು ಕೊಟ್ಟಿರುವ ಗ್ಯಾರಂಟಿ ಗಳು ಕೂಡ ನಿಲ್ಲುವುದಿಲ್ಲ. ಅವುಗಳ ಜತೆಯಲ್ಲೇ ನಾವು ಅಭಿವೃದ್ಧಿ ಕೂಡ ಸಾಧಿಸುತ್ತೇವೆ ಎಂದು ಅವರು ಪ್ರತಿಪಾದಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಕಚ್ಚಾ ತೈಲದ ‌ಬೆಲೆ ಸಾಕಷ್ಟು ಇಳಿದಿದೆ. ಆದರೆ ಮೋದಿ ಸರಕಾರ ಮಾತ್ರ ತೈಲೋತ್ಪನ್ನಗಳ ಬೆಲೆಯನ್ನು ಒಮ್ಮೆ ಕೂಡ ಇಳಿಸಿಲ್ಲ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ , ಡೀಸೆಲ್‌ ಮತ್ತು ಎಲ್ ಪಿಜಿ‌ ಬೆಲೆ ಜನರ ಕೈಗೆ ಎಟುಕುವಂತಿತ್ತು ಎಂದು ಎಂಬಿ ಪಾಟೀಲ್ ಹೇಳಿದರು.

ನಾವೀಗ ಕೇವಲ ಮೂರು ರೂಪಾಯಿ ಮಾತ್ರ ಏರಿಸಿದ್ದೇವೆ. ಆದರೆ ಮೋದಿ ಮತ್ತು ಬಿಜೆಪಿ ನೀತಿಗಳಿಂದ ಜನರ ಜೀವನ ದುಬಾರಿಯಾಗಿದೆ. ಇದು ವಾಸ್ತವ ಸಂಗತಿ. ಬಿಜೆಪಿ ನಾಯಕರು ಮೊದಲು ಇದರ ವಿರುದ್ಧ ದನಿ ಎತ್ತುವ ಕರ್ತವ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಹದಿನೈದು ಸಲ ಬಜೆಟ್ ಮಂಡಿಸಿದ್ದಾರೆ. ಅವರ ಅರ್ಥಿಕ ಜ್ಞಾನದ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ. ರಾಜ್ಯದ ಬೊಕ್ಕಸವನ್ನು ಹೇಗೆ ತುಂಬಬೇಕು ಎಂಬುದನ್ನು ಅವರು ಬಲ್ಲರು ಎಂದು ಎಂ.ಬಿ ಪಾಟೀಲ್ ನುಡಿದರು.

Key words:  oil, price, increase, Modi, Minister, MB Patil

Tags :

.