HomeBreaking NewsLatest NewsPoliticsSportsCrimeCinema

ಮೆಟಾ ಸಹಯೋಗದೊಂದಿಗೆ ಕಾಲೇಜುಗಳಲ್ಲಿ ಆನ್‌ ಲೈನ್ ಸುರಕ್ಷತೆ ಕಾರ್ಯಕ್ರಮ- ಸಚಿವ ಪ್ರಿಯಾಂಕ್‌ ಖರ್ಗೆ

04:47 PM Jul 04, 2024 IST | prashanth

ಬೆಂಗಳೂರು,ಜುಲೈ,4,2024 (www.justkannada.in):  ಸಾಮಾಜಿಕ ಜಾಲತಾಣಗಳು ಮತ್ತು ಸೈಬರ್‌ ತಾಣಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಹಾಗೂ ಶಕ್ತಿಯುತವಾದ ಪಾಸ್‌ ವರ್ಡ್‌ ಗಳನ್ನು ರೂಪಿಸುವುದು ಮತ್ತು  ಮೋಸದ ಜಾಲಗಳನ್ನು ಗುರುತಿಸುವ ಸಂಬಂಧ ಅಗತ್ಯವಿರುವ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮೆಟಾ ಕಂಪೆನಿ ಜೊತೆಗೂಡಿ 10 ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಇಂದು  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ  ʼಡಿಜಿಟಲ್ ನಾಗರೀಕ್ʼ ಮತ್ತು ಎಆರ್-ವಿಆರ್ ಕೌಶಲ್ಯʼ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳೊಂದಿಗೆ ಮಕ್ಕಳಿಗೆ ತರಬೇತಿ ನೀಡುವುದು ಮಾತ್ರವಲ್ಲದೆ ಅವರಲ್ಲಿ ಜಾಗರೂಕತೆ ಮತ್ತು ಜವಾಬ್ದಾರಿಯ ಮನಸ್ಥಿತಿಯನ್ನು ಹುಟ್ಟುಹಾಕಲಾಗುವುದು ಹಾಗೂ ಇದು ಮುಂದಿನ ಜೀವನದಲ್ಲಿ ಎಚ್ಚರಿಕೆಯ ಗಂಟೆಯಾಗಿ ಉಳಿಯುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ಸರ್ಕಾರ ಮತ್ತು ಮೆಟಾ ಕಂಪೆನಿ ಜಂಟಿಯಾಗಿ 2025ರ ವೇಳೆಗೆ ರಾಜ್ಯದ ಒಂದು ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳನ್ನು ಡಿಜಿಟಲ್ ಸುರಕ್ಷತಾ ಜ್ಞಾನ ಮತ್ತು ವರ್ಧಿತ ವಾಸ್ತವತೆ (ಆಗ್ಯುಮೆಂಟೆಡ್ ರಿಯಾಲಿಟಿ)/ಅಗೋಚರ ವಾಸ್ತವತೆ (ವರ್ಚುವಲ್ ರಿಯಾಲಿಟಿ ) ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಪಯಣವನ್ನು ಪ್ರಾರಂಭಿಸಿದೆ.

ಮೆಟಾ ಕಂಪೆನಿಯ ಭಾರತದ ಪಬ್ಲಿಕ್ ಪಾಲಿಸಿಯ ಮ್ಯಾನೇಜರ್‌ ಪ್ರಿಯಾಂಕಾ ರಾವ್ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಈ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎಕರೂಪ್ ಕೌರ್ ಉಪಸ್ಥಿತರಿದ್ದರು. ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂಎಸ್.ಶ್ರೀಕರ್, ಪಿಯು ಮಂಡಳಿಯ ನಿರ್ದೇಶಕರಾದ ಸಿಂಧು ಬಿ ರೂಪೇಶ್;  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತೆ ಕಾವೇರಿ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ರಾಜ್ಯದಾದ್ಯಂತ ವಿವಿಧ ಶಾಲೆಗಳು, ಪಿಯು ಕಾಲೇಜುಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ 18ರಿಂದ 24 ವರ್ಷದೊಳಗಿನ 10 ಲಕ್ಷ ವಿದ್ಯಾರ್ಥಿಗಳು ಡಿಜಿಟಲ್ ಜಾಗೃತಿ ತರಬೇತಿಯನ್ನು ಪಡೆಯುತ್ತಾರೆ. ಕರ್ನಾಟಕ ರಾಜ್ಯದಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಲಾಗಿದೆ. ಶಾಲೆ, ಪಿಯು ಕಾಲೇಜು, ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಾಸ್ಟರ್ ತರಬೇತುದಾರರನ್ನು ನಿಯೋಜಿಸಲಾಗುವುದು. ತರಬೇತುದಾರರು ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಜ್ಞಾನ ಮತ್ತು AR-VR ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಾರೆ.

Key words: Online, Safety, Program, Colleges, META, Priyank Kharge

Tags :
collegesMETAOnlinePriyank Khargeprogram.safety
Next Article