For the best experience, open
https://m.justkannada.in
on your mobile browser.

ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ? – ಬಿಎಸ್ ವೈ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ.

05:09 PM Feb 09, 2024 IST | prashanth
ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ  – ಬಿಎಸ್ ವೈ ಟೀಕೆಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ದಾವಣಗೆರೆ,ಫೆಬ್ರವರಿ,9,2024(www.justkannada.in): ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಂದು ಹರಿಹರದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ. ಕರ್ನಾಟಕದಿಂದ ನೀಡಲಾಗಿರುವ ತೆರಿಗೆಯನ್ನು ನಮಗೆ ನೀಡುತ್ತಿಲ್ಲ. 100 ರೂ.ಗೆ ಕೇವಲ 13 ರೂ. ರಾಜ್ಯಕ್ಕೆ ವಾಪಸ್ಸು ಬರುತ್ತಿದೆ. ರಾಜ್ಯದಿಂದ 4,30,000 ಕೋಟಿ ತೆರಿಗೆ ಬರುತ್ತಿದ್ದರೆ, ನಮಗೆ ಕೇವಲ 50,257 ಕೋಟಿ ರೂ.ಮಾತ್ರ ರಾಜ್ಯಕ್ಕೆ ಬರುತ್ತಿದೆ. ಕೇಂದ್ರದ ಈ ಧೋರಣೆಯನ್ನು ವಿರೋಧಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರದಿಂದ 34 ಲಕ್ಷ ರೈತರಿಗೆ 650 ಕೋಟಿ ರೂ. ತಾತ್ಕಾಲಿಕ ಬರ ಪರಿಹಾರ.

ಬರನಿರ್ವಹಣೆಗೆ ಸರ್ಕಾರದ ಕ್ರಮಗಳ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬರನಿರ್ವಹಣೆಯ ಕ್ರಮವಾಗಿ, ಕುಡಿಯುವ ನೀರು, ಮೇವು ,ಉದ್ಯೋಗ ನೀಡಲಾಗುತ್ತಿದ್ದು, ಒಟ್ಟು 860 ಕೋಟಿ ರೂ.ಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜನರು ಗುಳೇ ಹೋಗದಂತೆ ತಪ್ಪಿಸಲು ಹಾಗೂ ಅವರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ಒಬ್ಬ ರೈತನಿಗೆ ತಲಾ 2000 ದಂತೆ ಸುಮಾರು 34 ಲಕ್ಷ ರೈತರಿಗೆ 650 ಕೋಟಿ ರೂ. ನೀಡಲಾಗಿದೆ. ಐದು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಬರಪರಿಹಾರ ನೀಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆಯೇ ಹೊರತು, ಕೇಂದ್ರದೊಂದಿಗೆ ಸಂವಹಿಸಿ ಪರಿಹಾರ ದೊರಕಿಸಿ ಕೊಡುತ್ತಿಲ್ಲ ಎಂದರು.

Key words: oppose – Center-injustice - state – CM Siddaramaiah- BSY

Tags :

.