For the best experience, open
https://m.justkannada.in
on your mobile browser.

ಒಪಿಎಸ್ ಜಾರಿ ಬಗ್ಗೆ ಆದೇಶ: ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ- ಹೆಚ್.ಡಿಕೆ ಟೀಕೆ.

05:36 PM Jan 25, 2024 IST | prashanth
ಒಪಿಎಸ್ ಜಾರಿ ಬಗ್ಗೆ ಆದೇಶ  ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ  ಹೆಚ್ ಡಿಕೆ ಟೀಕೆ

ಬೆಂಗಳೂರು,ಜನವರಿ,25,2024(www.justkannada.in):  ರಾಜ್ಯ ಕಾಂಗ್ರೆಸ್ ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ.

ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ, ಅನುಮಾನವೇ ಇಲ್ಲ ಎಂದು ಕುಟುಕಿದ ಹೆಚ್.ಡಿ ಕುಮಾರಸ್ವಾಮಿ.

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳೇ ಬೇಕಾಯಿತು! ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ  ಸಿದ್ದರಾಮಯ್ಯ ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದೇ ಸಾಕ್ಷಿ.

ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ತನ್ನ ಪರಂಪರಾಗತ ವರ್ತನೆಯನ್ನು ಕಾಂಗ್ರೆಸ್ ಇನ್ನಾದರೂ ಬದಲಿಸಿಕೊಳ್ಳಬೇಕು. ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ OPS ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ. ನೌಕರರ ಬದುಕನ್ನು ಚುನಾವಣೆ ಸರಕನ್ನಾಗಿ ಮಾಡಿಕೊಳ್ಳುವುದು ಹೇಯ ಎಂದು ಹೆಚ್.ಡಿಕೆ ಟೀಕಿಸಿದ್ದಾರೆ.

Key words: OPS- Implementation –Order- HDK- Criticizes

Tags :

.