For the best experience, open
https://m.justkannada.in
on your mobile browser.

ಹಾಲು ಉತ್ಪಾದಕರ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸಲಿದೆ- ಸಚಿವ ಡಾ.ಹೆಚ್.ಸಿ.ಮಹದೇವಪ್ಪ.

05:56 PM Nov 16, 2023 IST | prashanth
ಹಾಲು ಉತ್ಪಾದಕರ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸಲಿದೆ  ಸಚಿವ ಡಾ ಹೆಚ್ ಸಿ ಮಹದೇವಪ್ಪ

ಮೈಸೂರು,ನವೆಂಬರ್,16,2023(www.justkannada.in):  ಹೈನುಗಾರಿಕೆಯು ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕೆ ಅನುಕೂಲವಾಗುವ ಕ್ಷೇತ್ರವಾಗಿದೆ. ಇದಕ್ಕೆ ಪೂರಕವಾಗಿ ಹಾಲು ಉತ್ಪಾದಕರ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ತಿ.ನರಸೀಪು ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರ ಸಂಘದ ಸಭಾಂಗಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸಾಯದ ಜೊತೆಗೆ ಹಳ್ಳಿಗರಿಗೆ ಪ್ರಮುಖ ಆದಾಯದ ಮೂಲ ಕ್ಷೀರಕ್ಷೇತ್ರವಾಗಿದೆ. ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಪಕ್ಷಭೇದವಿಲ್ಲದೆ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಹಾಲು ಉತ್ಪಾದಕರಿಗೆ ನೆರವಾಗುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಪ್ರೋತ್ಸಾಹ ದನ ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸುವ ಮೂಲಕ ಸ್ವಾಭಿಮಾನದ ಬದುಕಿಗೆ ಪೂರವಾಗಿದೆ ಎಂದು ಹೇಳಿದರು.

ಕ್ಷೇತ್ರದ ಜನರು ನನ್ನ ಮೇಲೆ ಅಪಾರವಾದ ನಂಬಿಕೆ ಇಟ್ಟು, ಚುನಾವಣೆಯಲ್ಲಿ ಉತ್ಸಾಹದಿಂದ ನನ್ನ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ನಾನು ಅಹರ್ನಿಶಿ ದುಡಿಯುವೆ. ತಿಂಗಳಾಂತ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳನ್ನು ಕರೆದು ಹೋಬಳಿವಾರು ಜನಸಂಪರ್ಕ ಸಭೆ ನಡೆಸಿ ಕ್ಷೇತ್ರದ ಜನರ ಸಮಸ್ಯೆ ಆಲಿಸಲಾಗುವುದು ಎಂದರು.

ಹಿಂದೆ ಲೋಕೋಪಯೋಗಿ ಸಚಿವ ಆಗಿದ್ದಾಗ ಕ್ಷೇತ್ರದ ಪ್ರತಿ ಗ್ರಾಮಗಳ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಈ ಬಾರಿಯೂ ಹೆಚ್ಚಿನ ಮಟ್ಟದ ಅಭಿವೃದ್ಧಿ ಮಾಡಲಾಗುವುದು. ಸರ್ಕಾರದ ವತಿಯಿಂದ ಕೃಷಿ, ಕೂಲಿಕಾರ್ಮಿಕರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗುವ ಯೋಜನೆಗಳನ್ನು ರೂಪಿಸಲಾವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳು ಹೆಚ್ಚಿನ ಕ್ರೀಯಾಶೀಲತೆಯಿಂದ ಜನಪರವಾಗಿ ಕೆಲಸ ಮಾಡಬೇಕು. ಜನರನ್ನು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಕಚೇರಿಗೆ ಅಲೆದಾಡಿಸಬಾರದು. ಕ್ಷೇತ್ರದಲ್ಲಿ ಬರ ಇರುವುದರಿಂದ ರೈತರ ಸಮಸ್ಯೆ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕೆ.ಡಿ.ಪಿ ಸದಸ್ಯರಾದ ಸುನೀಲ್ ಬೋಸ್, ಕೇತುಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಪ್ರಭಾಕರ್,  ಮೈಮುಲ್ ನಿರ್ದೆಶಕರಾದ ಆರ್.ಚಲುವರಾಜು, ಸಿ.ಓಂಪ್ರಕಾಶ್, ಕೆ.ಜಿ.ಮಹೇಶ್, ಉಮಾಶಂಕರ್, ಲೀಲಾ ನಾಗರಾಜು, ನೀಲಾಂಬಿಕ ಮಹೇಶ್, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ತಹಶಿಲ್ದಾರ್ ಸುರೇಶಾಚಾರ್, ತಾ.ಪಂ. ಇಒ ಸಿ.ಕೃಷ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Key words: Our government  -work -hard - milk producers – Minister- Dr. HC Mahadevappa

Tags :

.