For the best experience, open
https://m.justkannada.in
on your mobile browser.

 ಪ. ಮಲ್ಲೇಶ್ ಅವರು ಅಪ್ಪಟ ಸಮಾಜವಾದಿ-ಸಿಎಂ ಸಿದ್ದರಾಮಯ್ಯ

05:20 PM Nov 18, 2023 IST | prashanth
 ಪ  ಮಲ್ಲೇಶ್ ಅವರು ಅಪ್ಪಟ ಸಮಾಜವಾದಿ ಸಿಎಂ ಸಿದ್ದರಾಮಯ್ಯ

ಮೈಸೂರು, ನವೆಂಬರ್ 18,2023(www.justkannada.in):  ಪ. ಮಲ್ಲೇಶ್ ಅವರು ಅಪ್ಪಟ ಸಮಾಜವಾದಿಯಾಗಿದ್ದರು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಪ.ಮಲ್ಲೇಶ್ ರಚಿಸಿರುವ ಬುದ್ಧ ನಾಗಾರ್ಜುನರ ಶೂನ್ಯಯಾನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಜಕೀಯದ ಗೀಳು ಬರಲು ಪ್ರೊ. ನಂಜುಂಡಸ್ವಾಮಿ ಹಾಗೂ ಮಲ್ಲೇಶ್ ಕಾರಣ .

ನನಗೆ ರಾಜಕೀಯದ ಗೀಳು ಬರಬೇಕಾದರೆ ಪ್ರೊ. ನಂಜುಂಡಸ್ವಾಮಿ ಹಾಗೂ ಮಲ್ಲೇಶ್ ಕಾರಣ. ಅವರು ನನ್ನಂಥ ಯುವಕರಿಗೆ  ಮಾರ್ಗದರ್ಶಕರಾಗಿದ್ದರು ಹಾಗೂ ನಮ್ಮ ಏಳಿಗೆಯನ್ನು ಬಯಸುತ್ತಿದ್ದರು. ಬದ್ಧತೆಯ ಪ್ರಾಮಾಣಿಕ ರಾಜಕಾರಣ ಮಾಡಬೇಕು ಎಂದು ತಿಳಿಸುತ್ತಿದ್ದರು. ರಾಜಕೀಯವಾಗಿ ನಮ್ಮ ನಡುವೆ ಆತ್ಮೀಯ ಸ್ನೇಹವಿತ್ತು.  ತಪ್ಪು ಮಾಡಿದ್ದನ್ನು ಹೇಳುವ ಎದೆಗಾರಿಕೆ ಅವರಿಗೆ ಇತ್ತು ಎಂದರು.

ಮನಸ್ಸಿನಲ್ಲಿ ದ್ವೇಷ ಅಸೂಯೆಗಳಿರಲಿಲ್ಲ

ಒಮ್ಮೆ ಮಲ್ಲೇಶ್ ಅವರು ಊಟಕ್ಕೆ ಕರೆದಿದ್ದ ಸಂದರ್ಭದಲ್ಲಿ ಜೋರು ಜಗಳ ನಡೆದರೂ ಭಂಡತನದಿಂದ ಊಟ ಮುಗಿಸಿಯೇ ಹೊರಬಂದೆ ಎಂದು ಸಿಎಂ ಸಿದ್ದರಾಮಯ್ಯ ಸ್ವಾರಸ್ಯಕರ ಘಟನೆಯನ್ನು ಮೆಲುಕು ಹಾಕಿದರು. ಮರುದಿನವೇ ತಮ್ಮನ್ನು ಕರೆದು ಮಾತನಾಡಿಸುತ್ತಿದ್ದ ನಿರ್ಮಲ ಹೃದಯದ ಮಲ್ಲೇಶ್ ಅವರು ಮನಸ್ಸಿನಲ್ಲಿ ಯಾವುದೇ ದ್ವೇಷ ಅಸೂಯೆಯನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಭಾರತದ ಸಮಾಜದಲ್ಲಿ ಯಾರೂ ಅನ್ಯಾಯಕ್ಕೆ ಒಳಗಾಗಬಾರದು. ಯಾರೇ ಅನ್ಯಾಯಕ್ಕೊಳಗಾದರೂ ಅದರ ವಿರುದ್ಧ ಹೋರಾಟ ಮಾಡುವವರ ಪೈಕಿ ಮಲ್ಲೇಶ್ ಮುಂಚೂಣಿಯಲ್ಲಿರುತ್ತಿದ್ದರು ಎಂದರು.

1971 ರಲ್ಲಿ ಮಲ್ಲೇಶ್ ಅವರ ಪರಿಚಯವಾಗಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ ಅವರು,  ಮಲ್ಲೇಶ್ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲಕುಹಾಕಿದರು. ಪ್ರತಿ ಸೋಮವಾರ ಮಹಾರಾಜ ಕಾಲೇಜಿನ ಕ್ಯಾಂಟೀನಿನಲ್ಲಿ ನಡೆಯುತ್ತಿದ್ದ ಸ್ಟಡಿ ಸರ್ಕಲ್ ಗೆ ತೇಜಸ್ವಿ, ಅನಂತಮೂರ್ತಿ, ಟಿ.ಎನ್. ನಾಗರಾಜ್, ಮಲ್ಲೇಶ್ ಸೇರಿದಂತೆ ಇತರ ಪ್ರಮುಖ ಸಾಹಿತಿಗಳು ಭೇಟಿ ನೀಡುತ್ತಿದ್ದರು ಎಂದು ನೆನೆಸಿಕೊಂಡರು.

ಜಾತ್ಯಾತೀತ ವ್ಯಕ್ತಿ

ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಹೋರಾಟಗಳ ಬಗ್ಗೆ ಸ್ವಾರಸ್ಯಕರ ಘಟನೆಗಳನ್ನು  ಸಿಎಂ ಸಿದ್ದರಾಮಯ್ಯ ವಿವರಿಸಿದರು. ಜೀವನದುದ್ದಕ್ಕೂ ಹೋರಾಟಗಳನ್ನು ಮಾಡಿಕೊಂಡು ಬಂದ ಮಲ್ಲೇಶ್,  ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನ, ಎಲ್ಲರಿಗೂ ನ್ಯಾಯ ಸಿಗಬೇಕೆಂದು ಮಲ್ಲೇಶ್ ಶ್ರಮಿಸುತ್ತಿದ್ದರು. ಎಂದಿಗೂ ಜಾತಿ ಮಾಡಲಿಲ್ಲ. ಜಾತ್ಯಾತೀತವಾಗಿ ಎಲ್ಲರನ್ನು ನೋಡುತ್ತಿದ್ದರು. ಅವರ ಬಳಿ ಹೋಗುತ್ತಿದ್ದವರೆಲ್ಲಾ ಕೆಳಜಾತಿಯವರೇ ಎಂದರು.

ಸಂಪೂರ್ಣ ಕ್ರಾಂತಿ ಬಗ್ಗೆ ತುಡಿತ.

ದೇಶ ಒಟ್ಟಾಗಿ ಉಳಿಯಬೇಕಾದರೆ, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ನೆಲೆಯೂರಬೇಕಾದರೆ, ದ್ವೇಷದ ರಾಜಕಾರಣ  ಹೋಗಬೇಕಾದರೆ ಸಿದ್ದರಾಮಯ್ಯನವಂತವರೇ ಪುನ: ಮುಖ್ಯಮಂತ್ರಿಗಳಾಗಬೇಕೆಂದು ರಾಹುಲ್ ಗಾಂಧಿ ಸೇರಿದಂತೆ ಮಲ್ಲೇಶ್ ಕೂಡ ಬಯಸಿದ್ದರು. ಖಡಕ್ ಆಗಿ ಮಾತನಾಡುತ್ತಿದ್ದ ಮಲ್ಲೇಶ್, ಸಮಾಜದಲ್ಲಿ ಬದಲಾವಣೆಗೆ ಸಂಪೂರ್ಣ ಕ್ರಾಂತಿಯಾಗಬೇಕೆಂದು ಜೆಪಿ ಹೇಳಿದಂತೆ  ಸಂಪೂರ್ಣ ಕ್ರಾಂತಿ ಬಗ್ಗೆ ತುಡಿತವಿತ್ತು. ಎಷ್ಟೇ ತೊಂದರೆಯಿದ್ದರೂ ಹೋರಾಟ ನಿಲ್ಲಿಸುತ್ತಿರಲಿಲ್ಲ. ರಾಜಕೀಯವಾಗಿ ಮೇಲೆ ಬರುವವರಿಗೆ ಪ್ರೋತ್ಸಾಹ ಮಾಡುತ್ತಿದ್ದರು. ಹೇಳಿದಂತೆ ನಡೆದುಕೊಳ್ಳುವ ಪ್ರಾಮಾಣಿಕ ವ್ಯಕ್ತಿ ಎಂದು ವಿವರಿಸಿದರು.

ಪುಸ್ತಕವನ್ನು ಕೊಂಡು ಓದುವಂತೆ ಸಲಹೆ ನೀಡಿದ ಸಿಎಂ.

ಮಲ್ಲೇಶ್ ಅವರು ಬಹಳಷ್ಟು ಪುಸ್ತಕಗಳನ್ನು ಬರೆಯಬಹುದಿತ್ತು. ಹೋರಾಟಕ್ಕೆ ಹೆಚ್ಚು ಸಮಯ ನೀಡಿದ್ದರಿಂದ ಹೆಚ್ಚು ಪುಸ್ತಕಗಳನ್ನು ಬರೆಯಲು ಸಾಧ್ಯವಾಗಲಿಲ್ಲ.  ಸಾಹಿತ್ಯಾಸಕ್ತಿ, ಬರೆಯುವ ಆಸಕ್ತಿ ಇದ್ದರೂ, ಪುಸ್ತಕ ಬರೆಯುವಾಗ ಸಮಾಜವಾದ, ಸಂಸ್ಕೃತಿ, ಭಾಷೆ ಇವುಗಳ ಬಗ್ಗೆ ಹೆಚ್ಚು ಕಾಳಜಿ  ಇಟ್ಟುಕೊಂಡು ಹೋರಾಟ ಮಾಡುತ್ತಿದ್ದರು ಎಂದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ ತಿಮ್ಮಯ್ಯ ಪತ್ರಕರ್ತ ಜಿ.ಪಿ.ಬಸವರಾಜು, ಸವಿತಾ ಮಲ್ಲೇಶ್, ಉಗ್ರನರಸಿಂಹಗೌಡ, ಅಭಿರುಚಿ ಗಣೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: pa. Mallesh – true- socialist- CM -Siddaramaiah.

Tags :

.