HomeBreaking NewsLatest NewsPoliticsSportsCrimeCinema

ಆರ್. ಅಶೋಕ್, ಸಂಸದ ಯದುವೀರ್ ವಿರುದ್ದ ವಾಗ್ದಾಳಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಂಡ ಎಂ.ಲಕ್ಷ್ಮಣ್

04:43 PM Jun 17, 2024 IST | prashanth

ಮೈಸೂರು,ಜೂನ್,17,2024 (www.justkannada.in): ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಬಿಜೆಪಿಯವರು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ ಅಂತಾ ಬಾಯಿ ಬಡ್ಕೋತ ಇದ್ದಾರೆ. ಈ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಐನೂರು ಕೋಟಿ ರೂ. ಅನುದಾನ ಬರುತ್ತದೆ. ಮಾಧ್ಯಮಗಳು ಮೂರು ಸಾವಿರ ಕೋಟಿ ಅಂತ ಸುದ್ದಿ ಮಾಡುತ್ತಿವೆ. ಮಾಧ್ಯಮದವರು ತಮಗಿಷ್ಟ ಬಂದ ಹಾಗೆ ಸುದ್ದಿ ಮಾಡಿಕೊಳ್ಳುತ್ತಾರೆ. ಸರ್ಕಾರ ಯಾಕೆ ಹೆಚ್ಚಳ ಮಾಡಿದೆ ಎಂಬುದನ್ನ ಸಿಎಂ ಉತ್ತರ ಕೊಟ್ಟಿದ್ದಾರೆ. ಐದು ರಾಜ್ಯಗಳ ಚುನಾವಣೆ ವೇಳೆ ನಿರ್ಮಲಾ ಸೀತಾರಾಮನ್ ರವರು ಮೂರು ರೂಪಾಯಿ ಕಡಿಮೆ ಮಾಡಿದ್ರು. ಆಯಾ ರಾಜ್ಯಗಳು ಕೂಡ ಕಡಿಮೆ ಮಾಡಿಕೊಳ್ಳಲಿಕ್ಕೆ ಹೇಳಿದ್ದರು. ಆಗ ಕೇಂದ್ರ ಸರ್ಕಾರ ಮೆಚ್ಚಿಸಲಿಕ್ಕೆ ಬಸವರಾಜ್ ಬೊಮ್ಮಾಯಿಯವರು ಐದು ರೂಪಾಯಿ ಕಡಿಮೆ ಮಾಡಿದ್ರು. ಬಸವರಾಜ್ ಬೊಮ್ಮಾಯಿಯವರ ಈ ನಿರ್ಧಾರದಿಂದ 15, 184 ಕೋಟಿ ಇಲ್ಲಿ ತನಕ ನಷ್ಟ ಆಗಿದೆ. ಈ ಬೆಲೆ ಏರಿಕೆ ಯಾವುದೇ ರಾಜಕೀಯ ಪ್ರೇರಿತ ಅಲ್ಲ. ಅಶೋಕ್ ರವರು ಮೂಳೆ ಇಲ್ಲದ ನಾಲಿಗೆಯಲ್ಲಿ ಏನೇನೋ ಮಾತನಾಡುವುದಲ್ಲ. ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ. ಕೇಂದ್ರದಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ  22 ಬಾರಿ ಬೆಲೆ ಹೆಚ್ಚಳ ಮಾಡಿದ್ದೀರಾ ಎಂದು ಕಿಡಿಕಾರಿದರು.

ವಿಪಕ್ಷ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಅನ್ ಫಿಟ್.

ಇದೇ ವೇಳೆ ಆರ್ ಅಶೋಕ್ ವಿರುದ್ದ ಗುಡುಗಿದ ಎಂ.ಲಕ್ಷ್ಮಣ್, ನಾಲ್ಕು ವರ್ಷದ ನಂತರ ವ್ಯಾಟ್ ಚೇಂಜ್ ಮಾಡಿಕೊಳ್ಳಲಿಕ್ಕೆ ಅವಕಾಶ ಇದೆ. ಅಶೋಕ್ ರವರು ದಿನ ಬೆಳಿಗ್ಗೆ ಎದ್ದರೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದೇ ನಿಮ್ಮ ಕೆಲಸ. ವಿಪಕ್ಷ ನಾಯಕನ ಸ್ಥಾನಕ್ಕೆ ನೀವು ಅನ್ ಫಿಟ್. ಬಿಜೆಪಿಯವರು ಬೇಕಿದ್ದರೆ ಸಂವಾದಕ್ಕೆ ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಸಮರ್ಥನೆ.

ಹೆಚ್ ಡಿ ಕುಮಾರಸ್ವಾಮಿಯವರು ಪ್ರಧಾನಿ ಆಗೋಗಿದೀನಿ ಅನ್ನೋ ತರ ಮಾತನಾಡುತ್ತೀರಾ..? ರಾಜ್ಯ ಸರ್ಕಾರದ ವಿರುದ್ಧ ದಂಗೆ ಏಳಬೇಕು ಎನ್ನುತ್ತಿರಾ? ನೀವು ಸಿಎಂ ಆಗಿದ್ದಾಗ ವ್ಯಾಟ್ ಎಷ್ಟಿತ್ತು. ನಿಮಗೆ ವ್ಯಾಟ್ ನ ಬಗ್ಗೆ ಮಾಹಿತಿ ಇಲ್ಲವಾ? ಪಕ್ಕದ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನ ತಿಳಿದುಕೊಳ್ಳಿ. ನಾವು ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನ 1.10ಪೈಸೆ ಕಡಿಮೆ ಮಾಡಿದ್ದೇವೆ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲಿಕ್ಕೆ ನಿಮಗೇನು ಸಿಗುತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನೀವು ಮಾಡ್ತಿದೀರಾ ಎಂದು  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಂಡರು.

ಕೇವಲ ಫೋಟೋಗಳಿಗೆ ಪೋಸ್ ಕೊಡುವ ಕೆಲಸ ಮಾಡಬೇಡಿ- ಯದುವೀರ್ ವಿರುದ್ದ ಕಿಡಿ.

ಇದೇ ವೇಳೆ ಮೈಸೂರು-ಕೊಡಗು ನೂತನ ಸಂಸದ ಯದುವೀರ್ ವಿರುದ್ಧ ಹರಿಹಾಯ್ದ ಲಕ್ಷ್ಮಣ್, ನಾವು ಕೃತಜ್ಞತೆ ಸಭೆ ಮಾಡಿದ ನಂತರ ನೀವು ಎಲ್ಲಾ ಕಡೆ ಹೋಗ್ತಿದೀರಾ. ನಿಮಗೆ ಯಾರು ವೋಟ್ ಹಾಕಿದ್ದಾರೆ. ಯಾವ ಏರಿಯಾದಲ್ಲಿ ವೋಟ್ ಹಾಕಿದ್ದಾರೋ ಅಲ್ಲಿ ಹೋಗಿ ಕೈ ಮುಗಿಯೋ ಪ್ರಯತ್ನ ಮಾಡಬೇಡಿ. ಮೈಸೂರು ಕೊಡಗು ಕ್ಷೇತ್ರದ ಎಂಟು ಕ್ಷೇತ್ರದ 21 ಲಕ್ಷ ಮತದಾರರಿಗೂ ನೀವು ಎಂಪಿ. ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟು ಜನ ನಿಮಗೆ ಮತ ಹಾಕಿದ್ದಾರೆ. ಎಲ್ಲ ಕ್ಷೇತ್ರಕ್ಕೂ ಭೇಟಿ ನೀಡಿ, ಎಲ್ಲಾ ಮತದಾರರನ್ನು ಭೇಟಿ ನೀಡಿ. ನಾನು ಖಂಡಿತ ಸುಮ್ಮನೆ ಕೂರೋದಿಲ್ಲ. ನಿಮ್ಮ ಅಂಕು ಡೊಂಕುಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಹೋರಾಟಕೂಡ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ನಮ್ಮ ಸರ್ಕಾರದ ಯೋಜನೆ ಕೊಡಿಸುವ ಕೆಲಸ ನಾನು ಮಾಡುತ್ತೇನೆ. ಕೇಂದ್ರ ಸರ್ಕಾರದ ಯೋಜನೆ ನಾನು ತರಲಿಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನ ನೀವು ತನ್ನಿ ಅದಕ್ಕೆ ನಮ್ಮ ಬೆಂಬಲವಿದೆ. ಕೇವಲ ಫೋಟೋಗಳಿಗೆ ಪೋಸ್ ಕೊಡುವ ಕೆಲಸ ಮಾಡಬೇಡಿ. ಹಿಂದಿನ ಸಂಸದರು ಬರಿ ಕಿಡಿ ಹೊತ್ತಿಸುವ ಕೆಲಸ ಬಿಟ್ಟರೆ ಬೇರೇನೂ ಮಾಡಲಿಲ್ಲ ಎಂದು  ಮಾಜಿ ಸಂಸದ ಪ್ರತಾಪ್ ಸಿಂಹಗೆ ಪರೋಕ್ಷ ಟಾಂಗ್ ಕೊಟ್ಟರು.

Key words: petrol, diesel, price, hike,  M Laxman

Tags :
Dieselpetrolprice hikeR. Ashok-MP –Yaduveer-M. Laxman
Next Article