For the best experience, open
https://m.justkannada.in
on your mobile browser.

ರಾಜಕಾರಣ ನಿಂತ ನೀರಲ್ಲ, ದೃತಿಗೆಡದೆ ಪಕ್ಷ ಸಂಘಟಿಸಿ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ

06:29 PM Jun 29, 2024 IST | prashanth
ರಾಜಕಾರಣ ನಿಂತ ನೀರಲ್ಲ  ದೃತಿಗೆಡದೆ ಪಕ್ಷ ಸಂಘಟಿಸಿ  ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ

ಉಡುಪಿ,ಜೂನ್,29,2024 (www.justkannada.in): ರಾಜಕಾರಣ ಯಾರ ಮನೆಯ ಆಸ್ತಿ ಅಲ್ಲ. ಇದು ನಿಂತ ನೀರಲ್ಲ. ಸೋಲಿನಿಂದ ದೃತಿಗೆಡದೆ ಪಕ್ಷ ಸಂಘಟಿಸಿ, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , ಒಂದು ಕಾಲದಲ್ಲಿ ಮಂಗಳೂರು, ಉಡುಪಿ ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದವು. ಇದೀಗ ಕಾಂಗ್ರೆಸ್ ಸಂಕಷ್ಟ ಸ್ಥಿತಿಯಲ್ಲಿದೆ. ನಮ್ಮ ಪಕ್ಷದಲ್ಲಿ ನ್ಯೂನತೆಗಳಿವೆ. ಮೊದಲು ಅವು ಸರಿಯಾಗಬೇಕು. ಚುನಾವಣೆ ಒಳ್ಳೆತನದಿಂದ ನಡೆಯಲ್ಲ, ಒಳ್ಳೆಯ ಹೆಸರಿದ್ದರೂ ಚುನಾವಣೆಯಲ್ಲಿ ಪ್ರಯೋಜನವಿಲ್ಲ. ಸತ್ಯ ಒಂದು ದಿನ ಗೆದ್ದೆ ಗೆಲ್ಲುತ್ತೆ ಎಂದು ಹೇಳಿದರು.

ಯುಪಿಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು. ಈಗ ಯುಪಿಯಲ್ಲಿ ಆರು ಸಂಸದರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 4.50 ಲಕ್ಷ ಮತಗಳ ಲೀಡ್ ನಿಂದ ಗೆದ್ದಿದ್ದ ಮೋದಿ ಈ ಬಾರಿ ಕೇವಲ 1.45 ಲಕ್ಷದಿಂದ ಗೆದ್ದರು. ಇದರರ್ಥ ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಾಜಿ ಶಾಸಕ ಗೋಪಾಲ್ ಪೂಜಾರಿ ಕಳೆದ ಬಾರಿ ಗೆದ್ದಿದ್ದರೆ ಅವರೇ ಸಚಿವರಾಗುತ್ತಿದ್ದರು. ಎಲ್ಲರೂ ಮತ್ತೆ ಸಂಘಟನೆ ಮಾಡೋಣ. ಧೈರ್ಯದಿಂದ ಮುನ್ನಡೆಯಬೇಕು. ಮುಂದಿನ ಚುನಾವಣೆಗೆ ಈಗಲೇ ಸಿದ್ದತೆ ಮಾಡೋಣ, ಗೋಪಾಲ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುವೆ. ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.

ಬಿಜೆಪಿ‌ ಸರ್ಕಾರದ ಬಳಿ ಕಾರ್ಯಕ್ರಮಗಳಿಲ್ಲ. ಕೇವಲ ಪ್ರಚಾರವಷ್ಟೇ ಅವರ ಕೆಲಸ.‌ ರಾಹುಲ್ ಗಾಂಧಿ ಇವತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇದಕ್ಕೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರವರಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದೆ ಕಾರಣ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ರಾಷ್ಟ್ರಕ್ಕೆ ಸಿಗಲಿದೆ ಎಂದರು.

ಈ ವೇಳೆ ಮಾಜಿ ಶಾಸಕ ಗೋಪಾಲ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮದನ್ ಕುಮಾರ್, ಮುಖಂಡರಾದ ಕಿಶನ್ ಹೆಗ್ಡೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Key words: Politics, organize, party, Minister, Lakshmi Hebbalkar

Tags :

.