ಪ್ರಜ್ವಲ್ ರೇವಣ್ಣ ಪ್ರಕರಣ ಎಸ್ ಐಟಿ ತನಿಖೆಗೆ: ಯಾರೇ ಇರಲಿ ಕ್ರಮ ಕೈಗೊಳ್ಳುತ್ತೇವೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಬೆಂಗಳೂರು ಏಪ್ರಿಲ್ 29,2024 (www.justkannada.in): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐಟಿ ರಚನೆ ಮಾಡಿದ್ದೇವೆ ಯಾರೇ ಇರಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೂರುದಾರರು ಯಾರ ಹೆಸರು ಉಲ್ಲೇಖಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದ್ದೇವೆ. ತನಿಖಾ ತಂಡದಲ್ಲಿ ಎಸ್ಪಿ ಮಟ್ಟದ ಅಧಿಕಾರಿಗಳು ಇದ್ದಾರೆ. ಎಸ್ಐಟಿ ಅಧಿಕಾರಿಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತೆ. ಅಧಿಕಾರಿಗಳು ಪೆನ್ಡ್ರೈವ್, ಸಾಕ್ಷಿ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ಅಗತ್ಯವಿದ್ದರೇ ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದರು.
ಎಸ್ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲ ವಿಡಿಯೋಗಳನ್ನು ಎಫ್ಎಸ್ಲ್ಗೆ ಕಳುಹಿಸುತ್ತೇವೆ. ಸಂತ್ರಸ್ತರಿಗೆ ಭಯ ಹುಟ್ಟಿಸಿದರೇ ಅವರಿಗೆ ನಾವು ಭದ್ರತೆ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
Key words: Prajwal Revanna, case, SIT, Dr. G. Parameshwar