ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಈ ನಾಲ್ವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿ, ಸತ್ಯ ಹೊರಬರುತ್ತೆ-ಎಂ.ಲಕ್ಷ್ಮಣ್.
ಮೈಸೂರು,ಮೇ,8,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ, ವಿಡಿಯೋ ಹಂಚಿಕೆ ಸಂಬಂಧ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸುತ್ತಿರುವ ಜೆಡಿಎಸ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಈ ಪ್ರಕರಣವನ್ನ ಅಶೋಕ್ ಸೇರಿದಂತೆ ಹಲವರು ಡಿಕೆ ಶಿವಕುಮಾರ್ ಮೇಲೆ ಹೊರಿಸುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಆರ್ ಅಶೋಕ್, ವಿಜಯೇಂದ್ರ, ಪ್ರೀತಮ್ ಗೌಡ, ದೇವರಾಜೇಗೌಡ ನಾಲ್ವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸತ್ಯ ಹೊರಬರುತ್ತದೆ ಎಂದಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಎಂ.ಲಕ್ಷ್ಮಣ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಈ ಪ್ರಕರಣವನ್ನ ಅಶೋಕ್ ಸೇರಿದಂತೆ ಹಲವರು ಡಿ.ಕೆ ಶಿವಕುಮಾರ್ ಮೇಲೆ ಹೊರಿಸುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನಿದ್ದ ಬಿಜೆಪಿಯವರು ದೇವರಾಜೇಗೌಡ ಹೇಳಿಕೆ ಬಳಿಕ ಅಲರ್ಟ್ ಆಗಿದ್ದಾರೆ. ಮೊದಲು ದೇವರಾಜೇಗೌಡನನ್ನ ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ವಿಡಿಯೋ ಮಾಡಿದ್ದು ಪ್ರಜ್ವಲ್ ರೇವಣ್ಣ. ವಿಡಿಯೋ ತೆಗೆದುಕೊಂಡಿದ್ದು ಕಾರ್ತಿಕ್, ದೇವರಾಜೇಗೌಡ ಮೂಲಕ ವಿಡಿಯೋ ರಿಲೀಸ್ ಆಗಿದೆ. ಇದರ ನಡುವೆ ಡಿಕೆ ಶಿವಕುಮಾರ್ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
ಡಿಸೆಂಬರ್ 23 ರಂದು ವಿಜಯೇಂದ್ರ ಮೂಲಕ ಬಿಜೆಪಿ ಹೈಕಮಾಂಡ್ ಗೆ ಪೆನ್ ಡ್ರೈವ್ ತಲುಪಿತ್ತು. ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಹೇಳಿದ್ರೋ ಇಲ್ಲವೋ. ಹೀಗಿದ್ದರೂ ಕೂಡ ನೀವು ಪ್ರಜ್ವಲ್ ಕೈ ಮೇಲೆತ್ತಿ ಪ್ರಚಾರ ಮಾಡಿದ್ರಿ. ಮೈಸೂರಲ್ಲಿ ಮೋದಿಯವರು ಪ್ರಜ್ವಲ್ ಪರ ಕ್ಯಾಂಪೆನ್ ಮಾಡಿದ್ರು. ಇದೇನಾ ನಿಮ್ಮ ನೈತಿಕತೆ. ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ. ಇಂತಹ ನಾಯಕರ ಮಕ್ಕಳು, ಮೊಮ್ಮಕ್ಕಳಾಗಿ ನೀವು ಮಾಡುತ್ತಿರುವ ಕೆಲಸ ಏನು...? ಇಳಿ ವಯಸ್ಸಿನಲ್ಲಿ ದೇವೇಗೌಡರಿಗೆ ನೋವುಂಟು ಮಾಡ್ತಿದ್ದೀರಲ್ಲ ಸರಿನಾ...? ಒಕ್ಕಲಿಗ ಸಮುದಾಯದ ರಕ್ಷಣೆ ಮಾಡ್ತೀವಿ ಅಂತೀರಾ. ಒಕ್ಕಲಿಗ ಸಮುದಾಯದ ಹೆಣ್ಣುಮಕ್ಕಳು ಆ ವಿಡಿಯೋದಲ್ಲಿ ಇದ್ದಾರಲ್ಲ ಇದಕ್ಕೇನು ಹೇಳ್ತೀರಾ. ಎಸ್ ಐಟಿ ಮೇಲೆ ನಿಮಗೆ ನಂಬಿಕೆ ಇಲ್ಲ ಅಂದ್ರೆ ಸಿಬಿಐ, ಎನ್ ಐಎ ಸೇರಿದಂತೆ ಯಾವುದೇ ಇನ್ವೆಸ್ಟಿಗೆಷನ್ ಟೀಮ್ ಗೆ ಪ್ರಕರಣ ವಹಿಸಿ. ಬಿಜೆಪಿ ಜೆಡಿಎಸ್ ನೀವು ಮೈತ್ರಿ ಮಾಡಿಕೊಂಡಿದಿರಲ್ಲ ನೀವೇ ಸಿಬಿಐಗೆ ಈ ಕೇಸ್ ವಹಿಸಿ ಎಂದು ಎಂ.ಲಕ್ಷ್ಮಣ್ ಹೇಳಿದರು
ಪ್ರಕರಣ ಸಂಬಂಧ ಆರ್ ಅಶೋಕ್, ಬಿವೈ ವಿಜಯೇಂದ್ರ, ಪ್ರೀತಮ್ ಗೌಡ, ದೇವರಾಜೇಗೌಡ ನಾಲ್ವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಡಿಕೆಶಿ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಕಾರಣಕ್ಕೆ ಅವರ ಮೇಲೆ ಆರೋಪ ಮಾಡಬೇಡಿ.
ಎಸ್ ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್ ಪ್ರಜ್ವಲ್ ಸಿಕ್ಕ ಬಳಿಕ ತಾನೇ ವಿಚಾರಣೆ ನಡೆಯುವುದು, ಈಗಲೇ ತನಿಖೆ ಸರಿಯಿಲ್ಲ ಎಂದರೆ ಹೇಗೆ? ಸಿಎಂ ಎಸ್ಐಟಿ ಅವರೊಂದಿಗೆ ಮಾತನಾಡುವುದು ಬೇಡವೇ? ಸುಳ್ಳು ಮಾಹಿತಿ ಹರಡಿಸಿ ಸರ್ಕಾರ ದಿಕ್ಕು ತಪ್ಪಿಸಬೇಡಿ. ಡಿಕೆಶಿ ಒಕ್ಕಲಿಗ ನಾಯಕನಾಗಿ ಬೆಳೆಯುತ್ತಿರುವ ಕಾರಣಕ್ಕೆ ಅವರ ಮೇಲೆ ಆರೋಪ ಮಾಡಬೇಡಿ. ಡಿಕೆ ಶಿವಕುಮಾರ್ ದೇವರಾಜೇಗೌಡ ಅವರೊಂದಿಗೆ ಮಾತನಾಡಿದ್ದೇ ತಪ್ಪು ಎಂದು ಬಿಂಬಿಸಲಾಗಿದೆ. ಇಬ್ಬರ ಜಗಳದಲ್ಲಿ ಅಶೋಕ್ ಅವರು ಒಕ್ಕಲಿಗ ಲೀಡರ್ ಆಗಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ತನಿಖೆಗೆ ಸಹಕರಿಸಿ. ಸಮುದಾಯದ ಹಾಗೂ ಹೆಣ್ಣುಮಕ್ಕಳ ಮಾನ ಹಾಳು ಮಾಡಬೇಡಿ. ತನಿಖೆ ಆಗಿ ವರದಿ ಬಂದ ನಂತರ ಅದರ ಬಗ್ಗೆ ಮಾತನಾಡಿ, ಈಗಲೇ ಮಾತನಾಡಿ ದಿಕ್ಕು ತಪ್ಪಿಸಬೇಡಿ ಎಂದು ಕಿಡಿಕಾರಿದರು.
ಬಿಜೆಪಿಯ 68 ನಾಯಕರ ವಿರುದ್ಧ ಸೆಕ್ಸ್ ಸಿಡಿ ಇರುವ ಬಗ್ಗೆ ದೂರು ಇದೆ ಅವರುಗಳೆಲ್ಲಾ ಸ್ಟೇ ತಂದಿದ್ದಾರೆ. ರಾಜ್ಯದ 14 ನಾಯಕರ ವಿರುದ್ಧ ಕೂಡ ಈ ಆರೋಪ ಇದೆ, ಇದು ಬಿಜೆಪಿ ಅವರ ಛಾಳಿ ಆಗಿದೆ. ದೇವೇಗೌಡರಿಗೆ ಈ ಕಳಂಕ ಅಂಟಿರುವ ಬಗ್ಗೆ ನಮಗೂ ನೋವಾಗಿದೆ. ಕುಮಾರಸ್ವಾಮಿ ಅವರೇ ನಿಮ್ಮ ಅಣ್ಣನ ಮಗ ಎಂಬ ಕಾರಣಕ್ಕೆ ಏನು ಮಾಡಿದರೂ ಸರಿ ಎಂಬ ಮನಸ್ಥಿತಿ ಬಿಡಿ. ಕುಮಾರಸ್ವಾಮಿ, ಜೆಡಿಎಸ್ ಮುಖಂಡರೇ ಹಾಗೂ ಬಿಜೆಪಿ ಅವರೇ ದೇವರಾಜೇಗೌಡ, ಪ್ರೀತಂ ಗೌಡ, ಆರ್. ಅಶೋಕ್ ಹಾಗೂ ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಆಗ ಇಡೀ ಪ್ರಕರಣದ ಸತ್ಯ ಹೊರಬರಲಿದೆ. ಕುಮಾರಸ್ವಾಮಿ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡಬೇಡಿ. ಇವರ ವಿರುದ್ಧ ಯಾರು ಮಾತನಾಡಬಾರದು, ಇವರು ಮಾತ್ರ ಎಲ್ಲರ ಬಗ್ಗೆ ಮಾತನಾಡಬಹುದು ಎಂಬುದು ಎಷ್ಟು ಸರಿ. ನಾವು ಸಹ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿ ಎಂದು ಒತ್ತಾಯ ಮಾಡುತ್ತೇವೆ ಎಂದು ಎಂ ಲಕ್ಷ್ಮಣ್ ಹೇಳಿದರು.
ಕೊಲೆ ಮಾಡಿದವರನ್ನ ಬಿಟ್ಟು ಕತ್ತಿ ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಕೇಳ್ತಿದಿರಿ.
ಪೆನ್ ಡ್ರೈವ್ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಕೈವಾಡ ಆರೋಪ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಕೊಲೆ ಮಾಡಿದವರನ್ನ ಬಿಟ್ಟು ಕತ್ತಿ ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಕೇಳ್ತಿದಿರಿ. ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕು. ಅದನ್ನ ಬಿಟ್ಟು ಕತ್ತಿ ಮಾಡಿದವರಿಗೆ ಶಿಕ್ಷೆ ಕೊಡಿ ಅಂತ ಕೇಳ್ತಿದೀರಾ ಇದು ಯಾವ ನ್ಯಾಯ ಎಂದು ವ್ಯಂಗ್ಯವಾಡಿದರು.
Key words: Prajwal Revanna, video, case, M. Laxman