HomeBreaking NewsLatest NewsPoliticsSportsCrimeCinema

ರಸ್ತೆ ಅಪಘಾತಗಳು ಆಗದಂತೆ ತಡೆದು ಅಮೂಲ್ಯವಾದ ಜೀವಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ –ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ

04:37 PM Feb 14, 2024 IST | prashanth

ಮೈಸೂರು ಫೆಬ್ರವರಿ 14,2024 (www.justkannada.in): ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಉತ್ತಮ ರಸ್ತೆಗಳು, ಸಂಚಾರಿ ನಿಯಮಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತದಿಂದ ಸಾವುಗಳು ಆಗದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ  ಡಿಸಿ ಡಾ.ಕೆ.ವಿ ರಾಜೇಂದ್ರ ಅವರು ಮಾತನಾಡಿದರು.

ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳು ಇವೆ. ಆದರೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಅಪಘಾತಗಳು ಆಗುತ್ತಿವೆ. ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಜೆಸಿ ಕಾಲೇಜು ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಸುವುದರಿಂದ  3 ಜನ ಅಪಘಾತಕ್ಕೆ ಬಲಿಯಾಗಿದ್ದಾರೆ. ಈ ಅವೈಜ್ಞಾನಿಕ ಹಂಪ್ ಅಳವಡಿಸಿ ಅವಘಡಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು. ರಸ್ತೆಗಳನ್ನು ರಿಪೇರಿ ಹಾಗೂ ಕಾಮಗಾರಿ ಮಾಡುವಾಗ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರಸ್ತೆ ವೈಟ್ ಟ್ಯಾಪ್  ಗಳು,  ಸೂಚನಾ ಫಲಕಗಳನ್ನು ಹಾಕಬೇಕು.  ಬದಲಿ ರಸ್ತೆ ಬಳಕೆ ಕುರಿತು ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಮೈಸೂರು ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆ. ಯಾವ ಯಾವ ಪ್ರವಾಸಿ ತಾಣಗಳಿಗೆ ಯಾವ ರಸ್ತೆಯಲ್ಲಿ ಹೋಗಬೇಕು ಎಂಬ ಸೈನ್ ಬೋರ್ಡ್ ಗಳನ್ನು ಅಳವಡಿಸಬೇಕು. ಇದರಿಂದ ಪ್ರವಾಸಿಗರಿಗೆ ಸೂಕ್ತ ಮಾಹಿತಿ ದೊರೆಯುತ್ತದೆ. ಪುಟ್ ಪಾತ್ ಗಳ ಮೇಲೆ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮ ಮಾಡಿರುತ್ತಾರೆ. ಇದನ್ನು ತೆರವುಗೊಳಿಸಿ ಜನರು ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ವರದಿಯನ್ನು ಅರಣ್ಯ ಇಲಾಖೆಗೆ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಪಡೆದು ಅಗತ್ಯವಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ಕ್ರಮವಹಿಸಬೇಕು. ನಗರದಲ್ಲಿರುವ ಅವೈಜ್ಞಾನಿಕ ಹಂಪ್ ಗಳ ಕುರಿತು ಸ್ಧಳ ಪರಿಶೀಲನೆ ಮಾಡಿ ವರದಿಯನ್ನು ತಯಾರಿಸಿ ಒಂದು ವಾರದಲ್ಲಿ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಮೈಸೂರು ಗ್ರಾಮಾಂತರದಲ್ಲಿ 31 ನಗರ ವ್ಯಾಪ್ತಿಯಲ್ಲಿ 16 ಜನರು ಜನವರಿ ತಿಂಗಳಲ್ಲಿ ಅಪಘಾತ ಪ್ರಕರಣಗಳಿಂದ ಮರಣ ಹೊಂದಿದ್ದಾರೆ. ಈ ಅಪಘಾತಗಳು ಸಂಭವಿಸಲು ಕಾರಣಗಳು ಏನು ಎಂಬುವುದನ್ನು ವರದಿ ನೀಡಬೇಕು.

ಶಿವರಾಂ ಪೇಟೆ ಸರ್ಕಲ್ ನಲ್ಲಿ ಗೂಡ್ಸ್ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡು ಲೋಡಿಂಗ್ ಅನ್ ಲೋಡಿಂಗ್ ಮಾಡುತ್ತಾ ಇರುತ್ತಾರೆ. ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಆಗಿ ವಿಳಂಬ ಆಗುತ್ತದೆ. ಈ ಸಮಯವನ್ನು ಸರಿದೂಗಿಸಲು ವಾಹನ ಸವಾರರು ಮುಂದಿನ ಸಿಗ್ನಲ್ ಗಳಿಂದ ವೇಗವಾಗಿ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಶಿವರಾಂ ಪೇಟೆ ಸರ್ಕಲ್ ನಲ್ಲಿ ಪೀಕ್ ಸಮಯದಲ್ಲಿ ಗೂಡ್ಸ್ ವಾಹನಗಳನ್ನು ನಿಲ್ಲಿಸದಂತೆ ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಲ್ಮೆಟ್ ಧರಿಸದೆ ಇರುವವರು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವವರಿಗೆ ದಂಡ ವಿಧಿಸಿ. ಅವೈಜ್ಞಾನಿಕ ಹಂಪ್ ಗಳನ್ನು ತೆರವುಗೊಳಿಸಿ.  ಆಟೋ ಚಾಲಕರು, ಗೂಡ್ಸ್ ವಾಹನಗಳ ಚಾಲಕರು, ಬಸ್ ಚಾಲಕರು ಇವರಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ಮಾಡಿ ಸುರಕ್ಷತಾ ಚಾಲನಾ ನಿಯಮಗಳ ಕುರಿತು ತರಬೇತಿ ನೀಡಬೇಕು. ಎಂದು ಡಾ.ಕೆ.ವಿ ರಾಜೇಂದ್ರ ತಿಳಿಸಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅರ್ಷದ್ ಉರ್ ರೆಹಮಾನ್, ಉಪ ಪೊಲೀಸ್ ಆಯುಕ್ತರಾದ ಜಾಹ್ನವಿ, ಲೋಕೋಪಯೋಗಿ ಇಲಾಖೆಗೆ ಕಾರ್ಯಪಾಲಕ ಅಭಿಯಂತರರಾದ ರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Preventing -road accidents - saving –precious- lives-responsibility – mysore-DC-Dr. KV Rajendra

Tags :
Preventing -road accidents - saving –precious- lives-responsibility – mysore-DC-Dr. KV Rajendra
Next Article