ಕಾಡಾನೆ ದಾಳಿಯಿಂದ ಸರಣಿ ಸಾವು ಖಂಡಿಸಿ ಪ್ರತಿಭಟನೆ: ಅರಣ್ಯಸಚಿವರು ಸ್ಥಳಕ್ಕೆ ಬರುವಂತೆ ಪಟ್ಟು..
ಹಾಸನ,ಜನವರಿ,5,2024(www.justkannada.in): ನಿನ್ನೆ ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ನಡೆದಿದ್ದು ಕಾಡಾನೆ ದಾಳಿಯಿಂದ ಸರಣಿ ಸಾವು ಖಂಡಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಿನ್ನೆ ಕಾಡಾನೆ ದಾಳಿಗೆ ಕಾರ್ಮಿಕ ವಸಂತ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶವವಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದು ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೂಡಲೇ ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬೆಲೂರು ಶಾಸಕ ಹೆಚ್.ಕೆ ಸುರೇಶ್ ಭೇಟಿ..
ಪ್ರತಿಭಟನೆ ಹಿನ್ನೆಲೆ ಬೇಲೂರು ಶಾಸಕ ಹೆಚ್.ಕೆ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಈ ವೇಳೆ ಹಾಸನ ಡಿಸಿ ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜಿತಾ ಅವರು ಸಾಥ್ ನೀಡಿದರು.
ಶಾಸಕರ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಸ್ಥಳಕ್ಕೆ ಅರಣ್ಯಸಚಿವರು ಆಗಮಿಸುವಂತೆ ಪಟ್ಟು ಹಿಡಿದರು. ಈ ವೇಳೆ ಶಾಸಕ ಸುರೇಶ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ಬೇರೆ ಕಾರ್ಯಕ್ರಮವಿರುವ ಹಿನ್ನೆಲೆ ಸ್ಥಳಕ್ಕೆ ಆಗಮಿಸಲು ಸಾಧ್ಯವಿಲ್ಲ. ನೀವೆ ಮನವರಿಕೆ ಮಾಡಿ ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Key words: Protest -against -Elephant – attack-Hassan