ಸಂಸದ ಪ್ರತಾಪ್ ಸಿಂಹ ವಿರುದ್ದ ರಾಜ್ಯ ಹಿಂದುಳಿದ ವರ್ಗದಿಂದ ಪ್ರತಿಭಟನೆ: ಕೈಯಲ್ಲಿ ಬಾಂಬ್, ಪಾಸ್ ಹಿಡಿದ ಫ್ಲೆಕ್ಸ್ ತೆರವು.
ಮೈಸೂರು,ಡಿಸೆಂಬರ್,15,2023(www.justkannada.in): ಸಂಸತ್ ದಾಳಿ ನಡೆಸಿ ದುಷ್ಕರ್ಮಿಗಳು ಕೋಲಾಹಲ ಸೃಷ್ಠಿಸಿದ ಪ್ರಕರಣ ಸಂಬಂಧ ಇಂದು ಸಂಸದ ಪ್ರತಾಪ್ ಸಿಂಹ ವಿರುದ್ದ ರಾಜ್ಯ ಹಿಂದುಳಿದ ವರ್ಗದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗದಿಂದ ಪ್ರತಿಭಟನೆ ನಡೆಯಿತು. ಮೈಸೂರು ಮಹಾರಾಜ ಕಾಲೇಜು ಮೈದಾನದ ಬಳಿ ಸಂಸದ ಪ್ರತಾಪಸಿಂಹ ಕೈಯಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದ ಭಾವಚಿತ್ರದ ಫ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ಫ್ಲೆಕ್ಸ್ ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಮುಂದಾಗಿದ್ದು ಸಿಬ್ಬಂದಿ ಜೊತೆ ಹಿಂದುಳಿದ ಜಾಗೃತಿ ವೇದಿಕೆ ಸದಸ್ಯರ ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.
ಸಂಸದ ಪ್ರತಾಪ್ ಸಿಂಹ ರಾಜೀನಾಮೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯಿಂದ ಸಹಿ ಸಂಗ್ರಹ ಚಳುವಳಿ ನಡೆಸಿದರು. ಪ್ರತಿಭಟನೆ ಮಧ್ಯೆಯೇ ಪ್ರತಾಪ್ ಸಿಂಹ ಕುರಿತ ಬ್ಯಾನರ್ ಅನ್ನು ಪಾಲಿಕೆ ಸಿಬ್ಬಂದಿಗಳ ಮೂಲಕ ಪೊಲೀಸ್ ಇಲಾಖೆ ತೆರವುಗೊಳಿಸಿತು.
ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್, ಸಂಸದ ಪ್ರತಾಪ್ ಸಿಂಹರನ್ನ ಸಂಸದ ಸ್ಥಾನದಿಂದ ವಜಾ ಮಾಡಬೇಕು. ಬಳಿಕ ಅವರನ್ನ ಬಂಧನಕ್ಕೆ ಒಳಪಡಿಸಿ ವಿಚಾರಣೆ ನಡೆಸಬೇಕು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು. ಜೊತೆಗೆ ಪ್ರತಾಪ್ ಸಿಂಹ ಕಚೇರಿ ಸಿಬ್ಬಂದಿಗಳನ್ನ ವಿಚಾರಣೆಗೆ ಒಳಪಡಿಸಬೇಕು. ಪ್ರತಾಪ್ ಸಿಂಹ ಕಚೇರಿ ಸಿಬ್ಬಂದಿಗಳು ಪಾಸ್ ಗಳನ್ನ ಮಾರಾಟ ಮಾಡಿದ್ದಾರೆ ಎಂಬ ಅವಮಾನವಿದೆ. ಹಾಗಾಗಿ ನಾವು ಇಂದು ಸಹಿ ಸಂಗ್ರಹ ಚಳುವಳಿ ಮಾಡುತ್ತಿದ್ದೇವೆ ಎಂದರು.
ಕೆ ಎಸ್ ಶಿವರಾಮ್ ವಿರುದ್ದ ದೂರು ದಾಖಲಿಸಿದ ಬಿಜೆಪಿ.
ಸಂಸದ ಪ್ರತಾಪ್ ಸಿಂಹ ಕೈಗೆ ಬಾಂಬ್ ಕೊಟ್ಟು,ಉಗ್ರಗಾಮಿ ಎಂಬ ಫ್ಲೆಕ್ಸ್ ಅಳವಡಿಕೆ, ಪ್ರತಿಭಟನೆ ವಿಚಾರ ಸಂಬಂಧ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ವಿರುದ್ದ ಬಿಜೆಪಿ ದೂರು ದಾಖಲಿಸಲಾಗಿದೆ.
ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್ ವಿರುದ್ಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಲಾಗಿದೆ. ಕೆ.ಎಸ್ ಶಿವರಾಮ್ ವಿರುದ್ಧ ಶಕ್ತಿನಗರ ನಿವಾಸಿ ಬಿ ಆನಂದ್ ದೂರು ದಾಖಲಿಸಿದ್ದಾರೆ.
Key words: Protest –against- MP Pratap Simha-mysore