ಮುಡಾ ಹಗರಣ: ನಾಳೆ ಮೈಸೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ- ಎಲ್. ನಾಗೇಂದ್ರ
ಮೈಸೂರು,ಜುಲೈ,11,2024 (www.justkannada.in): ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ತಿಳಿಸಿದರು.
ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಎಲ್ ನಾಗೇಂದ್ರ, ನಾಳೆ ಮುಡಾ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ. ಪ್ರತಿಭಟನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಆಶೋಕ್, ಸಿಟಿ ರವಿ ಸೇರಿದಂತೆ ಹಲವು ಪ್ರಮುಖರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತದೆ. ಈ ಪ್ರಕರಣವನ್ನ ಸಿಬಿಐ ಗೆ ಬಹಿಸಲೇಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ನಾಳೆ ಪ್ರತಿಭಟನಾಕಾರರೆಲ್ಲ ಮಹಾರಾಜ ಕಾಲೇಜು ಮೈದಾನದಲ್ಲಿ ಸೇರಿ ಬಳಿಕ ಮುಡಾ ಕಚೇರಿ ಮುತ್ತಿಗೆ ಮಾಡುವ ಕೆಲಸ ಮಾಡುತ್ತೇವೆ. ಆದರೆ, ಪೋಲಿಸರು ಪ್ರತಿಭಟನಾಕಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಡಾ ಸಂಬಂಧ ಪ್ರತಿಭಟನೆ ಮಾಡಲು ಯಾರಿಗೂ ಅವಕಾಶ ಕೊಡದೇ ಜನಸಾಮಾನ್ಯರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಾವು ಏನೇ ಮಾಡಿದರೂ ನಾಳೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ. ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂದರು.
ಹಗರಣ ನಡೆದಿರುವುದು ನೂರಕ್ಕೆ ನೂರು ಸತ್ಯ- ಶಾಸಕ ಶ್ರೀವತ್ಸ
ಶಾಸಕ ಶ್ರೀವತ್ಸ ಮಾತನಾಡಿ, ಮುಡಾದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂಬುದು ಕಳೆದ ಎರಡು ವಾರಗಳಿಂದ ಎಪಿಸೋಡ್ ಲೆಕ್ಕದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಲೋಪ ಎದ್ದು ಕಾಣುತ್ತದೆ. ತಾಂತ್ರಿಕ ಸಮಿತಿ 180 ಪುಟಗಳ ವರದಿಯನ್ನ 2023 ರ ನವಂಬರ್ ನಲ್ಲೇ ಕೊಟ್ಟಿದೆ. ಇದರಲ್ಲೇ ಸಾಕಷ್ಟು ಅಕ್ರಮದ ಬಗ್ಗೆ ಸಾಕಷ್ಟು ಆಧಾರಗಳಿವೆ. ಸರ್ಕಾರ ಮೊಂಡಾಟಕ್ಕೆ ಬಿದ್ದಿದೆ ಈ ಹಗರಣವನ್ನ ಸಿಬಿಐಗೆ ವಹಿಸದೇ ಯಾರನ್ನೋ ರಕ್ಷಣೆ ಮಾಡಲು ಹೋಗಿ ಅವರ ಸಮಾಧಿಗೆ ಅವರೇ ತೋಡಿಕೊಳ್ಳುತ್ತಿದ್ದಾರೆ. ಹಗರಣ ನಡೆದಿರುವುದು ನೂರಕ್ಕೆ ನೂರು ಸತ್ಯ. ಆದರೂ ಸರ್ಕಾರ ಏನೂ ನಡೆದಿಲ್ಲ ಎಂದು ಉಡಾಫೆ ಮಾಡುತ್ತಿದೆ. ಈ ಪ್ರಕರಣವನ್ನ ಸಿಬಿಐ ವಹಿಸಲೇಬೇಕು. ಇಲ್ಲ ಅಂದ್ರೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ವಹಿಸಬೇಕು ಎಂದು ಆಗ್ರಹಿಸಿದರು.
Key words: protest, BJP, Mysore, Muda scam, L.Nagendra