For the best experience, open
https://m.justkannada.in
on your mobile browser.

ಕೇಂದ್ರದಿಂದ ಅನುದಾನ ತಾರತಮ್ಯ ಖಂಡಿಸಿ ಫೆ.7 ರಂದು ಪ್ರತಿಭಟನೆ:ಎಲ್ಲರೂ ಭಾಗಿ- ಸಿಎಂ ಸಿದ್ದರಾಮಯ್ಯ.

12:07 PM Feb 05, 2024 IST | prashanth
ಕೇಂದ್ರದಿಂದ ಅನುದಾನ ತಾರತಮ್ಯ ಖಂಡಿಸಿ ಫೆ 7 ರಂದು ಪ್ರತಿಭಟನೆ ಎಲ್ಲರೂ ಭಾಗಿ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 5,2024(www.justkannada.in):  ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಖಂಡಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಎಲ್ಲಾ ಶಾಸಕರು ಸಚಿವರು ಭಾಗಿಯಾಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರ ನೀಡಬಹುದು ಎಂಬ ವಿಶ್ವಾಸವಿತ್ತು. ಆದರೆ, ಕೇಂದ್ರ ಸರ್ಕಾರವು ಅದರ ಮಾನದಂಡದಂತೆ ಕೂಡ ರಾಜ್ಯಕ್ಕೆ ಹಣ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಈವರೆಗೆ ರಾಜ್ಯ ಸರ್ಕಾರ ಧರಣಿ ನಡೆಸಿರಲಿಲ್ಲ. ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾಳೆ ಸಂಜೆಯೇ ದೆಹಲಿಗೆ ಹೋಗುತ್ತೇವೆ, ನಾಡಿದ್ದು ಪ್ರತಿಭಟನೆ ಮಾಡುತ್ತೇವೆ. ಸಂವಿಧಾನ ಅಳವಡಿಸಿಕೊಂಡ ಬಳಿಕ ಒಕ್ಕೂಟ ವ್ಯವಸ್ಥೆ ಒಪ್ಪಿಕೊಂಡಿದ್ದೇವೆ. ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ಹೋಗುತ್ತದೆ. ಹಣಕಾಸು ಆಯೋಗ ನಿರ್ಧರಿಸಿದಂತೆ ಈ ಹಣ ರಾಜ್ಯಗಳಿಗೆ ನೀಡಬೇಕು ಎಂದು ಸಿಎಂ  ಸಿದ್ದರಾಮಯ್ಯ ಆಗ್ರಹಿಸಿದರು.

14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 41ರಷ್ಟು ಹಣ ನೀಡಬೇಕು. 14 ನೇ ಹಣಕಾಸು ಆಯೋಗದಲ್ಲಿ ಶೇ.4.71 ರಷ್ಟು ತೆರಿಗೆ ಇದ್ದುದ್ದು  15ನೇ ಹಣಕಾಸು ಆಯೋಗದಲ್ಲಿ ಶೇ.3. 64ರಷ್ಟು ತೆರಿಗೆ ಆಗಿದೆ. ರಾಜ್ಯಕ್ಕೆ ಬರೋ ಶೇ. 1.07 ರಷ್ಟು ತೆರಿಗೆ ಕಡಿಮೆಯಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೇ ಈ ಆಯೋಗ ರಚನೆ ಆಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5498 ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದ್ದರು. ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ದೆಹಲಿಯಲ್ಲಿ ನಮ್ಮ ಇಡೀ ಸರ್ಕಾರ ಪ್ರತಿಭಟನೆ ಮಾಡಲಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಪ್ರತಿಭಟನೆಯಲ್ಲಿ ಎಲ್ಲಾ ಸಂಸದರು ಕೂಡ ಭಾಗಿಯಾಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು. ಬರಗಾಲದ ಪರಿಹಾರ ಹಣವನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

Key words: Protest -February 7 - condemn -discrimination - grants - Centre- CM Siddaramaiah

Tags :

.