ರೈತ ವಿರೋಧಿ ನೀತಿ ಖಂಡಿಸಿ ಜು.18 ರಂದು ಎಲ್ಲಾ ಡಿಸಿ ಕಚೇರಿ ಬಳಿ ಪ್ರತಿಭಟನೆ- ಬಡಗಲಪುರ ನಾಗೇಂದ್ರ
ಮೈಸೂರು,ಜುಲೈ,13,2024 (www.justkannada.in): ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತರ ಆತ್ಮಹತ್ಯೆ ತಡೆಗಟ್ಟಲು ಆಗ್ರಹಿಸಿ ಇದೇ ಜುಲೈ 18 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, ಜುಲೈ 21 ನೇ ತಾರೀಖಿನಂದು ರೈತ ಹುತಾತ್ಮ ದಿನದಂದು ನಿರಂತರವಾಗಿ ಚಳವಳಿ ಹಮ್ಮಿಕೊಂಡಿರುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಸರ್ಕಾರಿ ಅಂಕಿ ಅಂಶದ ಪ್ರಕಾರ 28% ಮಳೆ ಪ್ರಮಾಣದ ಕೊರತೆ ಇದೆ. ಡ್ಯಾಮ್ ಗಳು ಇನ್ನೂ ತುಂಬಿಲ್ಲ. ಈ ನಿಟ್ಟಿನಲ್ಲಿ ಪ್ರತಿ ದಿನ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಇದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ವಿ. ಸೋಮಣ್ಣ , ಶೋಭಾ ಕರಂದ್ಲಾಜೆ ಅವರು ನಾಲ್ಕು ಜನ ಕೇಂದ್ರ ಮಂತ್ರಿಗಳು ಇದ್ದಾರೆ. ಎರಡು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ರೈತ ಹಿತವನ್ನು ಕಾಯುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಟ್ರಯಲ್ ಬ್ಲಾಸ್ಟ್ ಅವೈಜ್ಞಾನಿಕ ವಾಗಿದೆ ಎಂಬ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿರವರು ಸಭೆ ಕರೆಯಬೇಕು. ಪ್ರಜಾಪ್ರಭುತ್ವ ವಿರೋಧಿ ಆಡಳಿತ ನೋಡಿದ್ದೇವೆ. ಭ್ರಷ್ಟಾಚಾರ ಬಹಳ ಹೆಮ್ಮರವಾಗಿ ಬೆಳೆದಿತ್ತು. ಬಿಟ್ ಕಾಯಿನ್, ಪಿಎಸ್ ಐ ಹಗರಣ ಇತ್ಯಾದಿ ಭ್ರಷ್ಟಾಚಾರದಿಂದ ಬೇಸೆತ್ತು ಜನಾಧಿಕಾರವನ್ನು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಕಳೆದ ಸರ್ಕಾರಕ್ಕೂ ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ವ್ಯತ್ಯಾಸ ಇಲ್ಲ. ಕಾಂಗ್ರೆಸ್ ಸರ್ಕಾರ ಎಸ್.ಟಿ.ನಿಗಮದ 187ಕೋಟಿ ಹಗರಣ ಮಾಡಿದೆ ಎಂದು ಕಿಡಿಕಾರಿದರು.
ಕೃಷಿ ಬೆಲೆ ಆಯೋಗದ ಸಬಲೀಕರಣ ಕಡೆ ಗಮನ ಕೊಡ್ತಾ ಇಲ್ಲ. ಕೃಷಿ ಬೆಲೆ ಆಯೋಗದ ನಿರ್ಮಾಣ ಆಗಿಲ್ಲ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿಲ್ಲ. ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಸಂಪೂರ್ಣವಾಗಿ ತಿದ್ದುಪಡಿ ಮಾಡಿಲ್ಲ. ಸ್ವಲ್ಪ ಆಶಾದಾಯಕವಾಗಿದೆ ಅಷ್ಟೇ. ರೈತರ ಆತ್ಮಹತ್ಯೆ ತಡೆಯುವ ಸಲುವಾಗಿ ಯಾವುದೇ ಯೋಜನೆ ಇಲ್ಲ. ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ರೈತಪರ ಕಾರ್ಯಕ್ರಮ ರೂಪಿಸಿ ಆತ್ಮಸ್ಥೈರ್ಯ ತುಂಬಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ನಿಗದಿ ಮಾಡಿ ಖರೀದಿಸಬೇಕು. ಕೃಷಿಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವತಃ ರೈತರು ಭರಿಸುವ ತೀರ್ಮಾನ ವಾಪಸ್ ಪಡೆಯಬೇಕು. ಮೈಸೂರು ತಾಲ್ಲೂಕಿನ ಕೋಚನಹಳ್ಳಿ ರೈತರಿಗೆ ಮೋಸ ಮಾಡಿರುವ ಭೂ ಮಾಫಿಯ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಸಿದ್ದರಾಮಯ್ಯರವರು ರೈತ ಚಳವಳಿ ಹಿನ್ನಲೆಯಲ್ಲಿ ಬಂದವರು. ಸಮಾಜವಾದ ಹಿನ್ನೆಲೆಯಲ್ಲಿ ಬಂದವರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮೈಸೂರು ಮುಖ್ಯಮಂತ್ರಿ ಕ್ಷೇತ್ರ ಈ ಮುಡಾ ಹಗರಣದಿಂದ ತಲೆ ತಗ್ಗಿಸುವ ಆಗಿದೆ. ತನಿಖೆ ಶೀಘ್ರವಾಗಿ ಪೂರ್ಣಗೊಳಿಸಿ. ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಪಾರದರ್ಶಕವಾಗಿ ಯಾವುದೇ ಪಕ್ಷದಲ್ಲಿ ಯಾರೇ ಇದ್ದರೂ ಅವರ ಹೆಸರು ಬಹಿರಂಗಗೊಳಿಸಬೇಕು. ಮೂಡಾ ಸ್ವಚ್ಚ ಮಾಡಿ ಜನಸ್ನೇಹಿ ಆಗಿ ತನಿಖೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುತ್ತೇವೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದರು.
Key words: Protest, July 18 , DC office, Badgalpur Nagendra