HomeBreaking NewsLatest NewsPoliticsSportsCrimeCinema

ಮೂಲಸೌಕರ್ಯ ಕೋರಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

04:31 PM Jul 15, 2024 IST | prashanth

ಮೈಸೂರು,ಜುಲೈ,15, 2024 (www.justkannada.in): ಮೂಲಸೌಕರ್ಯ ಅನುಷ್ಠಾನಕ್ಕೆ ಆಗ್ರಹಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಸಾವಿರಾರು ಮಂದಿ ಸೋಮವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ನಗರದ ಯರಗನಹಳ್ಳಿ ಬಡಾವಣೆಯಲ್ಲಿರುವ ಮೆಗಾ ಡೈರಿ ಮುಂಭಾಗದಿಂದ ಹೊರಟ ಜಾಥಾ ಟೆರೇಷಿಯನ್ ಕಾಲೇಜು ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಸಮಾವೇಶಗೊಂಡಿತು.

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು, ಮೈಸೂರು ಪೂರ್ವ ವಲಯ ವ್ಯಾಪ್ತಿಯ 30 ಬಡಾವಣೆಗಳಲ್ಲಿ ಇನ್ನೂ ಬಗೆಹರಿಯದ ವಿವಿಧ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು ಈಗಾಗಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಯಾವುದೇ ರೀತಿಯ ಆಶಾಭಾವನೆ ಕಂಡುಬಂದಿಲ್ಲ ಎಂದು‌ ಬೇಸರ ವ್ಯಕ್ತಪಡಿಸಿದರು.

ನಾವು ಜಿಲ್ಲಾಧಿಕಾರಿಗಳ ಕಚೇರಿಗೆ ಬಹಳ ಹತ್ತಿರದಲ್ಲಿಯೇ ಇದ್ದೇವೆ ಎಂಬುದು ಒಂದು ಅಂಶವಾದರೆ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ನಮ್ಮ ವಲಯದ ಹಲವು ಬಡಾವಣೆಗಳು ಇವೆ ಎಂಬುದು ಗಮನಾರ್ಹ. ಇದನ್ನು ಮನಗಂಡು ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುವತ್ತ ಮುತುವರ್ಜಿ ವಹಿಸುವರೆಂಬ ನಂಬಿಕೆ ಇದೆ ಎಂದರು.

ನಮ್ಮ ಆದ್ಯತೆಗಳ ಮೊದಲನೇ ಅಂಶವಾಗಿ ಕಾವೇರಿ ನೀರು ಸಂಪರ್ಕ ಕಲ್ಪಿಸಬೇಕು. ಏಕೆಂದರೆ ನಾವು ಕುಡಿಯುತ್ತಿರುವ ನೀರಿನಲ್ಲಿ ಟಿಡಿಎಸ್ (600 ಪಿಪಿಎಂಗಿಂತ ಹೆಚ್ಚು), ಸಲ್ಫೇಟ್ (2.1ಎಂಜಿ/ಲೀ), ಕ್ಯಾಲ್ಸಿಯಂ (103.2ಎಂಜಿ/ಲೀ), ಮೆಗ್ನೀಷಿಯಂ (15ಎಂಜಿ/ಲೀ), ಫಾಸ್ಟೇಟ್ (5.75 ಎಂಜಿ/ಲೀ) ಹೊಂದಿದ್ದು, ಇದು ಕೂದಲು ಉದುರುವಿಕೆ, ಮೂಳೆ, ಕೀಲು ನೋವು, ಹೃದಯ ರಕ್ತನಾಳದ ಸಮಸ್ಯೆ, ಕಿಡ್ನಿ, ಸೋರಿಯಾಸಿಸ್ ಮತ್ತು ಎಸ್ಜಿಮಾ ಮುಂತಾದ ಚರ್ಮ ರೋಗಗಳಿಗೆ ಕಾರಣವಾಗುತ್ತಿದೆ. ಹೆಚ್ಚಿನ ಫ್ಲೋರೈಡ್ ಪರಿಣಾಮವಾಗಿ ಬಡಾವಣೆಗಳ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತಿದೆ. ಇದು ಬಹಳ ಅಪಾಯಕಾರಿ ಸಂಗತಿ ಎಂದು ಹೇಳಿದರು.

ವಲಯ ವ್ಯಾಪ್ತಿಯ ಬಡಾವಣೆಗಳಲ್ಲಿ ಒಳಚರಂಡಿ ಮಾರ್ಗದ ನಿರ್ಮಾಣ ಮತ್ತು ಅನುಮೋದಿತ ರೇಖಾಚಿತ್ರಗಳ ಮಾನದಂಡದ ಪ್ರಕಾರ ಎಸ್‌ಟಿಪಿ ನಿರ್ಮಾಣ ಆಗಬೇಕು. ಏಕೆಂದರೆ,  ಶೇ.40ರಷ್ಟು ಕೊಳಚೆ ನೀರು ಮತ್ತು ಎಸ್‌ ಟಿಪಿ ಕಾಮಗಾರಿಗಳು ಬಾಕಿ ಉಳಿದಿವೆ. ಅಂತರ್ ಒಳಚರಂಡಿ ಸಂಪರ್ಕ ಅಪೂರ್ಣವಾಗಿದೆ. ಇದರಿಂದಾಗಿ ಮಲೇರಿಯಾ, ಕಾಲರಾ, ಡೆಂಗ್ಯೂ ಕಾಯಿಲೆ ಇಡೀ ಜನಸಮೂಹವನ್ನು ಭಾದಿಸುತ್ತಿದೆ ಎಂದರು.

ಹೊರ ವರ್ತುಲ ರಸ್ತೆ ಪಕ್ಕದಲ್ಲಿರವ ತಿಪ್ಪಯ್ಯನ ಕೆರೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದ್ದು, ಈ ಭಾಗದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮಾತ್ರವಲ್ಲ, ಸುತ್ತಮುತ್ತಲಿನ ನಾಲ್ಕಾರು ಒಳಚರಂಡಿ ಮಾರ್ಗಗಳ ಕಲುಷಿತ ನೀರು ಕೆರೆಗೆ ಹರಿದುಬಂದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಈ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಮಾತ್ರವಲ್ಲ, ಮೈಸೂರು ಪೂರ್ವವಲಯ ಬಡಾವಣೆಗಳ ಅಲ್ಲಲ್ಲಿ ಹಾದುಹೋಗಿರುವ ರಾಜಕಾಲುವೆಯ ಅಕ್ಕಪಕ್ಕಗಳಲ್ಲಿ ಹಲವು ಕಟ್ಟಡಗಳು ನಿರ್ಮಾಣವಾಗಿದ್ದು, ಮಳೆನೀರು ಮತ್ತು ಕೊಳಚೆ ನೀರು ಸೇರಿ ಕೊಳವೆ ಬಾವಿಗಳಿಗೆ ನುಗ್ಗಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿವೆ ಎಂದು ಹೇಳಿದರು.

ಒಕ್ಕೂಟದ ಅಧೀನದಲ್ಲಿರುವ ಬಡಾವಣೆಗಳಲ್ಲಿ ಹೊಸ ಸಂಪರ್ಕ ರಸ್ತೆಗಳು ಮತ್ತು ಬೈಪಾಸ್ ರಸ್ತೆಗಳನ್ನು ಸುಧಾರಿಸುವುದು. ಇವೆಲ್ಲಕ್ಕಿಂತ ಮಿಗಿಲಾಗಿ ಅಗತ್ಯ ರಸ್ತೆಗಳ ರಚನೆ, ರಿಪೇರಿ ಮತ್ತು ಡಾಂಬರೀಕರಣದ ಕೆಲಸ ಅತ್ಯಗತ್ಯವಾಗಿ ಮಾಡಬೇಕಿದೆ. ಉದ್ಯಾನವನಗಳಲ್ಲಿ ಮಕ್ಕಳ ಸ್ನೇಹಿ ಆಟಿಕೆ ಸಾಮಗ್ರಿಗಳ ನಿರ್ಮಾಣ, ಆಟದ ಮೈದಾನ, ಜಿಮ್ ಉಪಕರಣಗಳು, ಸಾರ್ವಜನಿಕ ಉದ್ಯಾನವನಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಬಡಾವಣೆಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಸಾಮಾಜಿಕ ಅರಣ್ಯ ಹೆಚ್ಚಿಸಲು ವಿವಿಧ ಸಸಿಗಳನ್ನು ನೆಟ್ಟು ಬಡಾವಣೆಯನ್ನು ಹಸಿರೀಕರಣ ಮಾಡಬೇಕು ಮತ್ತು ಮಳೆ ಕೊಯ್ಲು ವ್ಯವಸ್ಥೆ ಕಡ್ಡಾಯ ಮಾಡಬೇಕು. ಬಡಾವಣೆಗಳಲ್ಲಿ ಸಿಗ್ನಲ್ ಲೈಟ್ಸ್, ಸ್ಪೀಡ್ ಬ್ರೇಕ್ ಮತ್ತು ಝಿಗ್ ಝಾಗ್ ಸಿಗ್ನಲ್ ಒದಗಿಸಬೇಕು. ಕಳ್ಳತನ, ದರೋಡೆ ಮತ್ತು ಮಾದಕ ದ್ಯವ್ಯ ಸೇವನೆ ಪ್ರಕರಣಗಳಂತಹ ಕಾನೂನುಬಾಹಿರ ಚಟುವಟಿಕೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಿಂಗ್ ರಸ್ತೆ ಮತ್ತು ಆಂತರಿಕ ಬಡಾವಣೆಗಳಲ್ಲಿ ಸಾರಿಗೆ ಬಸ್ ಸೌಲಭ್ಯ ಒದಗಿಸುವುದು. ಆಯ್ದ ಬಡಾವಣೆಗಳಿಗೆ ಸ್ಮಶಾನಗಳ ಗುರುತಿಸುವಿಕೆ ಮತ್ತು ನಿರ್ಮಾಣ ಹಾಗೂ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸಬೇಕು ಎಂದ ಅವರು, ಬಡಾವಣೆಗಳ ಸಂಗಮ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.

ಲೇಔಟ್ ಡೆವಲಪರ್ ಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾದರೆ, ಅಧಿಕಾರಿಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಇದರ ಕೆಟ್ಟ ಫಲ ಅನುಭವಿಸುತ್ತಿರುವವರು ಬಡಾವಣೆಯ ಜನ. ಮುಂದಿನ ಮಕ್ಕಳಿಗೆ ನಾವು ಉತ್ತಮ ವಾತಾವರಣ ಬಿಟ್ಟುಕೊಡದಿದ್ದಲ್ಲಿ ಅವರು ನಮಗೆ ಶಾಪ ಹಾಕುತ್ತಾರೆ. ನಾವು ಮೌನವಾಗಿದ್ದಷ್ಟು ಬದುಕು ಭಾರವಾಗಲಿದೆ ಎಂದು ಸೂಚ್ಯವಾಗಿ ತಿಳಿಸಿದರು.

ಡಿಸಿ, ನೀರಾವರಿ, ಮುಡಾ, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್, ಸಣ್ಣ ನೀರಾವರಿ, ಚೆಸ್ಕಾಂ, ವಿದ್ಯುತ್, ರಸ್ತೆ ಸಾರಿಗೆ ಸೇರಿದಂತೆ ಎಲ್ಲಾ ಇಲಾಖೆಗೂ ಪತ್ರ ಬರೆದು ಗಮನ ಸೆಳೆಯಲಾಗಿದೆ. ಅವರ ಮೇಲೆ ಮತ್ತಷ್ಟು ಒತ್ತಡ ಹೇರಬೇಕಾದ ಅನಿವಾರ್ಯತೆ ಇದೆ. ನಾವು ತೆರಿಗೆದಾರರು, ನಮ್ಮ ಮೂಲಸೌಕರ್ಯ ಕೇಳುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.

ಈ ವೇಳೆ ಒಕ್ಕೂಟದ ಪದಾಧಿಕಾರಿಗಳಾದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ‌ ಕಾರ್ಯದರ್ಶಿ ಎಚ್.ಎಸ್.‌ರಾಘವೇಂದ್ರ ಭಟ್ ಸೇರಿದಂತೆ ಒಕ್ಕೂಟದ ನಿರ್ದೇಶಕರು, ೩೦ ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words:  protest, mysore, demanding, infrastructure

Tags :
demandinginfrastructureMysore.protest
Next Article