For the best experience, open
https://m.justkannada.in
on your mobile browser.

UPSC  ಎಕ್ಸಾಮ್ ದಿನದಂದೇ PSI ಪರೀಕ್ಷೆ: ಸರ್ಕಾರದ ವಿರುದ್ದ ಬಿಜೆಪಿ ಕಿಡಿ

01:54 PM Sep 05, 2024 IST | prashanth
upsc  ಎಕ್ಸಾಮ್ ದಿನದಂದೇ psi ಪರೀಕ್ಷೆ  ಸರ್ಕಾರದ ವಿರುದ್ದ ಬಿಜೆಪಿ ಕಿಡಿ

ಬೆಂಗಳೂರು, ಸೆಪ್ಟಂಬರ್,5,2024 (www.justkannada.in): ಸೆಪ್ಟಂಬರ್.22ರಂದು ಯುಪಿಎಸ್ಸಿ ಮುಖ್ಯ ಪರೀಕ್ಷೆ, ಎಸ್ಎಸ್ ಸಿ ಪರೀಕ್ಷೆ ನಡೆಯಲಿದ್ದು ಅಂದೇ ಪಿಎಸ್ ಐ ಪರೀಕ್ಷೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,   ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ  ಕಾಂಗ್ರೆಸ್ ಸರ್ಕಾರ, ಯುಪಿಎಸ್ಸಿ ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ.

ಯುಪಿಎಸ್ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತಿದೆ. ಅದರಂತೆ, ಜೂನ್ 16ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ  ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಪಿಎಸ್ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ. ಈ ಮೂಲಕ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ. ಸೆ.22ರಂದು ನಿಗದಿಯಾಗಿರುವ ಯುಪಿಎಸ್ಸಿ ಮುಖ್ಯ ಪರೀಕ್ಷೆ, ಎಸ್ಎಸ್ಸಿ ಪರೀಕ್ಷೆ ಜೊತೆಗೆ ಪಿಎಸ್ಐ ಪರೀಕ್ಷೆಯೂ ನಡೆದರೆ ಮೂರೂ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿ ಗೊಂದಲದ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಅವರು ಈ ಹಿಂದೆ ಮೇಲ್ಮನೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಯುಪಿಎಸ್ಸಿ, ಎಸ್ಎಸ್ಸಿ ಹಾಗೂ ಎನ್ಟಿಎ  ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಂದ ಪ್ರಕಟಿತವಾಗುವ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತಯೇ? ಎಂಬ ಪ್ರಶ್ನೆಗೆ ಇಲ್ಲ  ಒಂದು ವೇಳೆ ಪರೀಕ್ಷೆಗೆ ತೊಂದರೆಯಾದರೇ ಪರೀಕ್ಷೆ ದಿನಾಂಕ ಮರು ನಿಗದಿಪಡಿಸಲಾಗುವುದು ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.

ಸದ್ಯ ಉಲ್ಟಾ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಸೆ.22ರಂದು ಪಿಎಸ್ಐ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ, ಕೂಡಲೇ, ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು, ಸಾವಿರಾರು ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪಿಎಸ್‌ಐ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಲಿ ಎಂದು ಬಿಜೆಪಿ ಆಗ್ರಹಿಸಿದೆ.

Key words: PSI, UPSC exam, same day, Govt, BJP

Tags :

.