For the best experience, open
https://m.justkannada.in
on your mobile browser.

ಪದಬಂಧ ಬೌದ್ಧಿಕ ಯೋಚನೆಗಳಿಗೆ ಪೂರಕ: ಸಚಿವ ಪ್ರಿಯಾಂಕ್‌ ಖರ್ಗೆ

06:28 PM Sep 05, 2024 IST | prashanth
ಪದಬಂಧ ಬೌದ್ಧಿಕ ಯೋಚನೆಗಳಿಗೆ ಪೂರಕ  ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು,ಸೆಪ್ಟಂಬರ್,5,2024 (www.justkannada.in): ಕಳೆದ ನಾಲ್ಕು ದಶಕಗಳಿಂದ ಕನ್ನಡ ಪತ್ರಿಕೆಗಳಿಗೆ ಕನ್ನಡ ಪದಬಂಧ ರಚಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್‌ ಬರೆದಿರುವ ಎಂಟು ಪದಬಂಧ ಪುಸ್ತಕಗಳು ಹಾಗೂ ಎರಡು ಕನ್ನಡ ಅಕ್ಷರ ಸುಡೂಕು ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.

ಮನುಷ್ಯನ ಬೌದ್ಧಿಕ ಆಲೋಚನೆಗಳಿಗೆ ಪೂರಕವಾಗಬಹುದಾದ ಹಾಗೂ ಕನ್ನಡ ಭಾಷಾ ಸಂಪತ್ತನ್ನು ಹೆಚ್ಚಿಸುವ ಪದಬಂಧಗಳು ಮಕ್ಕಳು, ವಿದ್ಯಾರ್ಥಿಗಳು ಹಾಗೂ ವಯಸ್ಕರಿಗೆ ಸಾಮಾನ್ಯಜ್ಞಾನದ ಅರಿವು ನೀಡಲು ಸಹಕಾರಿಯಾಗಬಲ್ಲದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.

ವಿಶ್ವದಲ್ಲಿ ಪದಬಂಧ ಪುಸ್ತಕಗಳು ಬಿಡುಗಡೆಯಾಗಿ ಒಂದು ಶತಮಾನ ಗತಿಸಿರುವ ಈ ಸಂದರ್ಭದಲ್ಲಿ ಕನ್ನಡದ ಹತ್ತು ಪದಬಂಧ ಪುಸ್ತಕಗಳು ಏಕಕಾಲಕ್ಕೆ ಬಿಡುಗಡೆಗೊಳ್ಳುತ್ತಿರುವುದು ಅತ್ಯಂತ ಮಹತ್ವಯುತವಾಗಿದೆ, ಲೇಖಕರೊಬ್ಬರ ಹತ್ತು ಪುಸ್ತಕಗಳು ಒಮ್ಮೆಲೆ ಲೋಕಾರ್ಪಣೆಗೊಂಡಿರುವುದು ಸಹ ವಿಶೇಷವಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮಕ್ಕಳನ್ನು ಚಿಂತನೆಗೆ ಹಚ್ಚುವ ಪದಬಂಧ ಪುಸ್ತಕಗಳನ್ನು ವಿಶೇಷವಾಗಿ ಗ್ರಾಮ ಪಂಚಾಯತಿಗಳ ಅರಿವು ಕೇಂದ್ರಗಳಾದ ಗ್ರಂಥಾಲಯಗಳಿಗೆ ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ, ಕನ್ನಡ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸುವ ಪದಬಂಧಗಳು ವಿಶ್ವದಾದ್ಯಂತ ಜನಮನ್ನಣೆಗಳಿಸಿದೆ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಸುಡೂಕು ಸಂಖ್ಯಾ ಸಮಸ್ಯೆಗೆ ಪ್ರಹ್ಲಾದರಾವ್‌ ಅಕ್ಷರ ರೂಪ ನೀಡಿದ್ದು, ಒಂಬತ್ತು ಅಕ್ಷರಗಳ ಪದವನ್ನು ಈ ಸಮಸ್ಯಾ ಬಂಧದಲ್ಲಿ ಬಳಸಿಕೊಂಡಿದ್ದಾರೆ, ಇದು ಸಹ ಮಕ್ಕಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಬಲ್ಲದು ಎಂದೂ ಸಚಿವರು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪುಸ್ತಕಗಳು ಬಿಡುಗಡೆಗೊಂಡ ಸಂದರ್ಭದಲ್ಲಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಲೇಖಕ ಅ.ನಾ.ಪ್ರಹ್ಲಾದರಾವ್‌ ಮತ್ತು ಪುಸ್ತಕಗಳ ಪ್ರಕಾಶಕರಾದ ವಸಂತ ಪ್ರಕಾಶನದ ಕೆ.ಎಸ್.ಮುರಳಿ ಇದ್ದರು.

Key words: Puzzles, Supplement, Intellectual Thoughts, Minister, Priyank Kharge

Tags :

.