ವಾಲ್ಮೀಕಿ ನಿಗಮದ ಹಗರಣ: ಸಿಎಂ ಸಿದ್ದರಾಮಯ್ಯರ ರಾಜೀನಾಮೆಗೂ ಆಗ್ರಹಿಸಿದ ಆರ್.ಅಶೋಕ್
ಬೆಂಗಳೂರು,ಜೂನ್,6,2024 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಸಚಿವ ಬಿ.ನಾಗೇಂದ್ರ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಸಹ ತನಿಖೆ ಪೂರ್ಣಗೊಳ್ಳುವವರೆಗೂ ರಾಜೀನಾಮೆ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಆರ್.ಅಶೋಕ್, ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ 187 ಕೋಟಿ ರೂಪಾಯಿ ಹಣವನ್ನ ಲಪಟಾಯಿಸಿ, ಪ್ರಾಮಾಣಿಕ ಅಧಿಕಾರಿಯೊಬ್ಬರ ಸಾವಿಗೆ ಕಾರಣರಾಗಿದ್ದ ಭ್ರಷ್ಟ ಸಚಿವ ಬಿಎನ್ ನಾಗೇಂದ್ರ ಅವರ ರಾಜೀನಾಮೆ ಪಡೆಯದೆ, ಅವರನ್ನು ರಕ್ಷಣೆ ಮಾಡುವ ಭಂಡತನ ಪ್ರದರ್ಶನ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿಯ ನಿರಂತರ ಹೋರಾಟ ಹಾಗೂ ಜನತೆಯ ಒತ್ತಡಕ್ಕೆ ಮಣಿದು ಕಡೆಗೂ ವಿಧಿಯಿಲ್ಲದೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ.
ಸಾಮಾಜಿಕ ನ್ಯಾಯದ ಚಾಂಪಿಯನ್, ಅಹಿಂದ ನಾಯಕ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು, ವಾಲ್ಮೀಕಿ ಸಮುದಾಯದ ಕಲ್ಯಾಣಕ್ಕೆ ಸೇರಬೇಕಾದ ಹಣವನ್ನ ಲೂಟಿ ಹೊಡೆಯುವ ಮೂಲಕ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಡುಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿಗಳಿಸಿ ಕಳಂಕಿತವಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ವಿಶ್ವಾಸವನ್ನ ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.
187 ಕೋಟಿ ಮೌಲ್ಯದ ಈ ಬಹುಕೋಟಿ ಹಗರಣ ರಾಜ್ಯ ಹಣಕಾಸು ಇಲಾಖೆಯ ಕೈವಾಡವಿಲ್ಲದೆ ನಡೆಯುವುದು ಅಸಾಧ್ಯವಾಗಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಪ್ರಕರಣದ ತನಿಖೆ ಪೂರ್ಣವಾಗುವವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಧಿಕಾರದಿಂದ ದೂರ ಉಳಿಯಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೆ, ನಾನು ಈಗಾಗಲೇ ಹೇಳಿರುವಂತೆ ರಾಜ್ಯದಲ್ಲಿರುವ ATM ಸರ್ಕಾರಕ್ಕೆ ಸಾವಿರಾರು ಕೋಟಿ ನಿಧಿ ಹೊಂದಿರುವ ನಿಗಮ ಮಂಡಳಿಗಳೇ ATM ಗಳಾಗಿರುವ ಅನುಮಾನ ದಟ್ಟವಾಗಿದ್ದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಡಿಯಲ್ಲಿರುವ ನಿಗಮ ಮಂಡಳಿಗಳ ಹಣಕಾಸು ಸ್ಥಿತಿ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ಆಡಿಟ್ ನಡೆಸಿ ಶ್ವೇತ ಪತ್ರ ಹೊರಡಿಸಬೇಕು. ಈ ಎರಡೂ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
Key words: R. Ashok, demand, resignation, CM Siddaramaiah