ಸರ್ಕಾರಿ ನಿವಾಸಕ್ಕೆ ಆರ್.ಅಶೋಕ್ ಮನವಿ: ಡಿಸಿಎಂಗೆ ಹಂಚಿಕೆಯಾಗಿರುವ ಮನೆಗೆ ಬೇಡಿಕೆ.
ಬೆಂಗಳೂರು, ಜನವರಿ,18,2024(www.justkannada.in): ವಿಪಕ್ಷ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ನಾಯಕ ಆರ್. ಅಶೋಕ್ ಇದೀಗ ಸರ್ಕಾರಿ ನಿವಾಸ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ನಿವಾಸಗಳಿಗೆ ಆರ್.ಅಶೋಕ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದಾರೆ. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ ಶಿವಕುಮಾರ್ ಗೆ ಹಂಚಿಕೆಯಾಗಿದೆ. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ರೇಸ್ ವ್ಯೂ ಕಾಟೇಜ್ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್ ಗೆ ಹಂಚಿಕೆಯಾಗಿದೆ. ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ.
ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ಆಯ್ದುಕೊಳ್ಳುವಂತೆ ವಿಪಕ್ಷ ನಾಯಕರಿಗೆ ಸರ್ಕಾರ ಸಲಹೆ ನೀಡಿದೆ. ಆದರೆ, ಅದಕ್ಕೆ ಒಪ್ಪದ ಅಶೋಕ್ ನಿರ್ದಿಷ್ಟ ಮೂರು ಬಂಗಲೆಗಳ ಪೈಕಿ ಒಂದು ಬಂಗಲೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆರ್ ಅಶೋಕ್ ವಿಧಾನಸಭೆ ವಿಪಕ್ಷ ನಾಯಕರಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನಿವಾಸಕ್ಕೆ ಬೇಡಿಕೆಯಿಟ್ಟಿದ್ದಾರೆ.
Key words: R.Ashok- request – government- residence