ಮಳೆ ಹಾನಿ ಪರಿಹಾರಕ್ಕೆ ಹಣ ಬಿಡುಗಡೆ: ಗ್ರಾ.ಪಂ ಟಾಸ್ಕ್ ಫೋರ್ಸ್ ರಚನೆ- ಸಚಿವ ಕೃಷ್ಣಭೈರೇಗೌಡ
ಬೆಂಗಳೂರು, ಜುಲೈ, 19,2024 (www.justkannada.in) : ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಾನಿ ಸಂಭವಿಸಿದ್ದು ಮಳೆ ಹಾನಿ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಇಂದು ವಿಧಾನಸಭೆ ಅಧಿವೇಶನದಲ್ಲಿ ಮಳೆ ಹಾನಿ ಕುರಿತು ಚರ್ಚೆ ನಡೆದಿದ್ದು, ನಿಯಮ 69 ಅಡಿಯಲ್ಲಿ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಸಂಪುಟ ಸಭೆಯಲ್ಲಿ ಹಾನಿ ಪರಿಹಾರ ಬಗ್ಗೆ ಚರ್ಚೆ ಮಾಡುತ್ತೇವೆ. ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆ ಆಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ ಶೇಕಡಾ 9ರಷ್ಟು ಹೆಚ್ಚು ಮಳೆಯಾಗಿದೆ. ಪರಿಹಾರ ಕ್ರಮಕ್ಕೆ ಎಲ್ಲಾ ಜಿಲ್ಲೆಗಳಿಗೆ 777.54 ಕೋಟಿ ರೂ. ನೀಡಲಾಗಿದ್ದು, ಮಳೆ ಹಾನಿ ಪರಿಹಾರ ಕ್ರಮಕ್ಕೆ ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಆರು ಜಿಲ್ಲೆಗಳಲ್ಲಿ 5 ಎನ್ಡಿಆರ್ಎಫ್ ತುಕಡಿ ನಿಯೋಜನೆ ಮಾಡಲಾಗಿದ್ದು, ಸಮಸ್ಯೆ ಉಂಟಾಗುವ 2,225 ಗ್ರಾಮಗಳನ್ನು ಗುರುತಿಸಲಾಗಿದೆ. 1,200ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ತಾಲೂಕು ಮಟ್ಟದ ಅಧಿಕಾರಿ ಪ್ರತಿ ಗ್ರಾಮ ಪಂಚಾಯಿತಿಗೆ ಪ್ರವಾಹ ನಿರ್ವಹಣೆಗೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಅಂಕೋಲಾ ಹೆದ್ದಾರಿ ಕುಸಿತ ಪ್ರಕರಣ ಸಂಬಂಧ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಅವರು ಸ್ಲೋಪಾಗಿ ಗುಡ್ಡ ಕಟ್ ಮಾಡಿಲ್ಲ. ವರ್ಟಿಕಲ್ ಆಗಿ ಗುಡ್ಡ ಕಟ್ ಮಾಡಿದ್ದಾರೆ. ಹೀಗಾಗಿ ಇಂತಹ ತೊಂದರೆಯಾಗಿದೆ. ಹೆದ್ದಾರಿ ಪ್ರಾಧಿಕಾರ ಇಂತಹ ಕೆಲಸ ಮಾಡಿದೆ. ಅವೈಜ್ಙಾನಿಕವಾಗಿ ಮ್ಯಾಪಿಂಗ್ ಮಾಡಲಾಗಿದೆ ಸಕಲೇಶಪುರ ವ್ಯಾಪ್ತಿಯಲ್ಲೂ ಅದೇ ರೀತಿ ಆಗಿದೆ. ಮೊನ್ನೆ ಗುಡ್ಡ ಕುಸಿದಾಗ ಪೆಟ್ರೋಲ್ ಗಾಡಿ ನದಿಗೆ ಉರುಳಿದೆ. ತುಂಬಾ ಡೆಂಜರಸ್ ಪರಿಸ್ಥಿತಿ ನಿರ್ಮಾಣ ಆಗ್ತಿತ್ತು ಹಾಗಾಗಿ ಬಹಳನಾಜೂಕಾಗಿ ಅಲ್ಲಿ ತೆರವು ಮಾಡಿದ್ದೇವೆ. ರಾತ್ರಿವೇಳೆ ಪ್ರಯಾಣ ನಾವೇ ರದ್ಧು ಮಾಡಿದ್ದೇವೆ. ಸಕಲೇಶಪುರ,ಕೊಡಗಿನಲ್ಲಿ ರಸ್ತೆ ಬಂದ್ ಮಾಡಿದ್ದೇವೆ ಎಂದು ಹೇಳಿದರು.
ಒಟ್ಟು ರಾಜ್ಯದ ಡ್ಯಾಂಗಳಲ್ಲಿ 536 ಟಿಎಂಸಿ ನೀರಿದೆ. ಎಲ್ಲಾ ಜಲಾಶಯಗಳಲ್ಲಿ ಸೇರಿ ಅಷ್ಟು ನೀರಿದೆ. ಯಾವ ನದಿ ಅಪಾಯಕಾರಿಯಾಗಿದೆ. ಎಲ್ಲೆಲ್ಲಿ ಅನಾಹುತಗಳು ಆಗಬಹುದು. ಇದರ ಮೇಲೆ ಕೂಡ ಗಮನ ಇಟ್ಟಿದ್ದೇವೆ. ಕೆಆರ್ ಎಸ್ ಗೆ 44,617 ಕೂಸೆಕ್ಸ್ ನೀರು ಹರಿದು ಬರುತ್ತಿದೆ. ಆಲಮಟ್ಟಿಗೆ 40,478 ಕೂಸೆಕ್ಸ್ ನೀರಿನ ಹರಿವು ಇದೆ ಎಂದು ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
Key words: rain, damage, funds, Task Force- Minister, Krishnabhaire gowda