ರಾಜಭವನ ರಾಜಕೀಯ ಕಚೇರಿ ಆಗಬಾರದು: ರಾಜ್ಯಪಾಲರಿಂದ ನ್ಯಾಯ ಕೊಡುವ ಭರವಸೆ- ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು,ಆಗಸ್ಟ್, 31,2024 (www.justkannada.in): ಮಾಜಿ ಮುಖ್ಯಮಂತ್ರಿಯೊಬ್ಬರ ಹಾಗೂ ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ನ್ಯಾಯ ಕೊಡುವ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಕಾಂಗ್ರೆಸ್ ನಾಯಕರ ನಿಯೋಗದೊಂದಿಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಜಭವನ ರಾಜಕೀಯ ಕಚೇರಿ ಆಗಬಾರದು ಎಂಬುದು ನಮ್ಮ ಉದ್ದೇಶ. ಮಾಜಿ ಸಿಎಂ ಮತ್ತು ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಕಾನೂನು ಬದ್ದವಾಗಿ, ನ್ಯಾಯಬದ್ಧವಾಗಿ ಸಮಾನತೆಯಿಂದ ಅನುಮತಿ ನೀಡಬೇಕೆಂದು ವಿನಂತಿಸಿದ್ದೇವೆ ಎಂದರು.
ರಾಜಭವನ ಪಕ್ಷಾತೀತವಾಗಿ ನಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಅಧಿಕಾರದಲ್ಲಿರುವ ನಾವು ಯಾರೂ ಶಾಶ್ವತವಲ್ಲ. ಸಂವಿಧಾನಬದ್ದವಾಗಿ ರಚನೆಯಾಗಿರುವ ರಾಜ್ಯಪಾಲರ ಸ್ಥಾನ ನ್ಯಾಯಾಲಯದ ಸ್ಥಾನದಲ್ಲಿದೆ. ರಾಜಭವನ ಸರ್ಕಾರವನ್ನು ರಕ್ಷಿಸುವ ಕೆಲಸ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನವನ್ನ ನೀಡುವ ಮೂಲಕ ಜನರು ನಮಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಬಲಿಷ್ಠ ಸರ್ಕಾರವನ್ನು ಅಸ್ಥಿರಗೊಳಿಸುವ ದೊಡ್ಡ ಪ್ರಯತ್ನ ಹಾಗೂ ಸಂಚು ನಡೆಯುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
Key words: Raj Bhavan, not, political office, DCM, DK Shivakumar