ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಬೂರಿ ಜವರಯ್ಯ ನಿಧನ: ಸಂತಾಪ ಸೂಚನೆ.
ಬೆಂಗಳೂರು,ಫೆಬ್ರವರಿ,3,2024(www.justkannada.in): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಬೂರಿ ಜವರಯ್ಯ ಅವರು ಫೆಬ್ರವರಿ 2 ರಂದು ಅನಾರೋಗ್ಯದಿಂದ ನಿಧನರಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂತಾಪ ಸೂಚಿಸಿದೆ.
ತಂಬೂರಿ ಜವರಯ್ಯ ಅವರು ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದವರಾಗಿದ್ದು, ಜಂಬಾಡಿ ದಾಸಯ್ಯ ಮತ್ತು ಗಿರಿಜಮ್ಮನವರ ಮಗನಾಗಿ 1938 ರಲ್ಲಿ ಜನಿಸಿದರು. 5 ನೇ ತರಗತಿಯವರೆಗೆ ಬಸರಾಳು ಸರ್ಕಾರಿ ಶಾಲೆಯಲ್ಲಿ ಓದಿದ್ದ ಇವರು ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಉನ್ನತ ಶಿಕ್ಷಣ ಕೈಗೆಟಕಲಿಲ್ಲ.
ರುದ್ರಮುನಿ ಸ್ವಾಮಿಗಳ ಉಪದೇಶದಿಂದ ಮಾತ್ರ ಮೋಕ್ಷ ಎಂದು ತಿಳಿದ ಜವರಯ್ಯ ದಂಪತಿಗಳು ದೀಕ್ಷೆ ಸ್ವೀಕರಿಸಿ ಅಂದಿನಿಂದ ತತ್ವಪದ ಮತ್ತು ಶಿವಧ್ಯಾನ ವೃತ್ತಿ ಅವರ ಕಾಯಕವಾಯಿತು. ತತ್ವಪದ ಹಾಡುತ್ತ ಏಕಧಾರಿಯನ್ನು ನುಡಿಸುತ್ತಾ ಕುಳಿತರೆ ರಾತ್ರಿ ಹಗಲು ಎಂಬ ಪರಿವೇ ಇಲ್ಲ. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹುಟ್ಟು, ಸಾವು ಶುಭ ಕಾರ್ಯಕ್ರಮಗಳು ನಡೆದರೆ ಪ್ರಥಮ ಆಹ್ವಾನವೇ ತಂಬೂರಿ ಜವರಯ್ಯನವರಿಗೆ ಸಿಗುತ್ತಿತ್ತು.
ತಂಬೂರಿ ಜವರಯ್ಯನವರ ತತ್ವಪದವನ್ನು ಗುರುತಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ತತ್ವಪದ ಗಾಯಕರಾಗಿ ಆಯ್ಕೆಮಾಡಿ 2017 ರಲ್ಲಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ವಯೋವೃದ್ಧರಾಗಿ ಬಳಲುತ್ತಿದ್ದ ತಂಬೂರಿ ಜವರಯ್ಯ ಅವರು ಫೆಬ್ರವರಿ 2 ರ ಬೆಳಿಗ್ಗೆ ನಿಧನರಾಗಿದ್ದಾರೆ.
Key words: Rajyotsava awardee- Tamburi Javaraya- passes away- condolence