For the best experience, open
https://m.justkannada.in
on your mobile browser.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತಕುಮಾರ್ ಹೆಗಡೆ ವಾಗ್ದಾಳಿ.

04:44 PM Jan 13, 2024 IST | prashanth
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ  ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಸಂಸದ ಅನಂತಕುಮಾರ್ ಹೆಗಡೆ ವಾಗ್ದಾಳಿ

ಉತ್ತರ ಕನ್ನಡ,ಜನವರಿ,13,2024(www.justkannada.in): ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲ್ಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ,  'ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ' ಎಂದು ಏಕವಚನ ಪ್ರಯೋಗಿಸಿದ್ದಾರೆ.

ನಾನು ಅಯೋಧ್ಯೆಗೆ ಹೋಗುತ್ತೇನೆ, ಆದರೆ 22 ಕ್ಕೆ ಹೋಗಲ್ಲ ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ದಮ್ ಎಂದು ಅನಂತ್ ಕುಮಾರ್  ಹೆಗಡೆ ಹೇಳಿದರು.

ಹಾಗಯೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಆಗಲಿದೆ. ಇದನ್ನು ಬೇಕಾದರೆ ಬೆದರಿಕೆ ಎಂದು ಬೇಕಾದರೂ ತಿಳಿಯಿರಿ. ಬಾಬ್ರಿ ಮಸೀದಿ ನಿರ್ನಾಮ ಮಾಡಿದಂತೆ ಭಟ್ಕಳದಲ್ಲಿ ಮಾಡುವುದು ಖಂಡಿತ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಶಿರ್ಸಿಯ ಸಿಪಿ ಬಜಾರ್​​ ನಲ್ಲಿಯೂ ಮಸೀದಿ ಇದೆ. ಅದು ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ಥಾನ ಕಾಣುತ್ತದೆ ಎಂದು ಕಿಡಿಕಾರಿದರು.

ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕೋ ತನಕ ಈ ಹಿಂದೂ ಸಮಾಜ ಸುಮ್ಮನಿರಲ್ಲ. ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ. ಹಿಂದೂ ಧರ್ಮ ಋಣ ಇಟ್ಟಿಕೊಳ್ಳುವ ಧರ್ಮ ಅಲ್ಲವೇ ಅಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.

ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲವೇ ಅಲ್ಲ. ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು ನಮ್ಮ ವಿರೋಧಿಗಳು. ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೊದವರು ನಮ್ಮ ವಿರೋಧಿಗಳು. ಅಹಿಂದೂ ಮಾನಸಿಕತೆ ನಮ್ಮ ವಿರೋಧ. ಗತಿಗೆಟ್ಟ ಅಹಿಂದೂ ಮಾನಸಿಕತೆ ನಮ್ಮ ವಿರೋಧ ಎಂದು ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

Key words: Ram Mandir- Inauguration-Program-MP- Ananthakumar Hegde – CM- Siddaramaiah.

Tags :

.