ಕಾಂಗ್ರೆಸ್ ರಾಮನ ಹೆಸರು ಸಹಿಸಿಕೊಳ್ಳಲ್ಲ: ಹೀಗಾಗಿ ರಾಮನಗರ ಹೆಸರು ಬದಲಾವಣೆಗೆ ಪ್ರಯತ್ನ- ಶಾಸಕ ಅಶ್ವತ್ ನಾರಾಯಣ್
ಬೆಂಗಳೂರು, ಜುಲೈ, 9, 2024 (www.justkannada.in): ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯಗೆ ಈಗಾಗಲೇ ಮನವಿ ಸಲ್ಲಿಸಿದ್ದು ಹೆಸರು ಬದಲಾವಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿ ಆಕ್ರೋಶ ಹೊರ ಹಾಕಿದ ಶಾಸಕ ಅಶ್ವಥ್ ನಾರಾಯಣ್, ಕಾಂಗ್ರೆಸ್ ಯಾವುದೇ ಕಾರಣಕ್ಕೂ ರಾಮನ ಹೆಸರು ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕಾಗಿ ರಾಮನಗರ ಜಿಲ್ಲೆಯ ಹೆಸರು ಬದಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಮ ಇದ್ದಾನೆ ಅಂತಾ ರಾಮನಗರ ಹೆಸರು ಬದಲಾಯಿಸುತ್ತಿದ್ದಾರೆ. ನಾಮಕರಣ ಮಾಡೋದೇ ಇವರ ದೊಡ್ಡ ಸಾಧನೆ. ಇದು ರಾಮನಗರದ ಜನತೆ, ರಾಜ್ಯದ ಜನರ ಭಾವನೆ ವಿರುದ್ಧವಾಗಿದೆ. ರಾಮನಗರ ಜಿಲ್ಲೆ ಹೆಸರು ಬದಲಿಸಲು ಸಂಪೂರ್ಣ ವಿರೋಧಿಸುತ್ತೇವೆ. ಬೆಲೆ ಏರಿಕೆಯಾಗುತ್ತೆ ಎಂದು ಅವರು ನೀಡುವ ಕಾರಣ ಒಪ್ಪುವುದಿಲ್ಲ. ಕಾಂಗ್ರೆಸ್ ಸರ್ಕಾರ ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಇವರು ರಾಮನ ಹೆಸರು ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ರಾಮನ ಹೆಸರಿಗೆ ದೊಡ್ಡ ಶಕ್ತಿ ಇದೆ, ಜನ ಏನು ಬೇಕಾದರೂ ಸಾಧಿಸುತ್ತಾರೆ. ಜಿಲ್ಲೆಯ ಜನ ಹೆಸರು ಬದಲಾಯಿಸಿ ಎಂದು ಕೇಳಿದ್ರಾ? ಹೆಸರು ಬದಲಾವಣೆಯಲ್ಲೂ ಹೆಸರು ಮಾಡುತ್ತೇನೆ ಅಂದ್ರೆ ನಡೆಯಲ್ಲ. ನಿಮ್ಮ ತುಷ್ಟೀಕರಣ ರಾಜಕಾರಣವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಗುಡುಗಿದರು. .
Key words: Ramanagara, name, change, MLA Ashwath Narayan