For the best experience, open
https://m.justkannada.in
on your mobile browser.

ರಮೇಶ್ ಜಾರಕಿಹೊಳಿಗೆ ಎಷ್ಟು ಕೆಟ್ಟರೂ ಬುದ್ದಿ ಬಂದಿಲ್ಲ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ.

02:41 PM Nov 02, 2023 IST | prashanth
ರಮೇಶ್ ಜಾರಕಿಹೊಳಿಗೆ ಎಷ್ಟು ಕೆಟ್ಟರೂ ಬುದ್ದಿ ಬಂದಿಲ್ಲ  ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕಿಡಿ

ಮೈಸೂರು,ನವೆಂಬರ್,1,2023(www.justkannada.in): ರಾಜ್ಯ ಸರ್ಕಾರ ಪತನವಾಗುತ್ತೇ, ಸಿಎಂ, ಡಿಸಿಎಂ ಮಾಜಿಗಳಾಗುತ್ತಾರೆ ಎಂದು ಹೇಳುತ್ತಿರುವ ರಮೇಶ್ ಜಾರಕಿಹೊಳಿಗೆ ಎಷ್ಟು ಕೆಟ್ಟರೂ ಬುದ್ದಿ ಬಂದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ‌ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಮೇಶ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಪತನವಾಗುತ್ತೇ, ಸಿಎಂ, ಡಿಸಿಎಂ ಮಾಜಿಗಳಾಗುತ್ತಾರೆ ಎಂದು  ಹೇಳುತ್ತಿದ್ದಾರೆ.  ಮೊದಲು ನಿಮ್ಮ ಮೇಲಿನ ಪ್ರಕರಣ ಕುರಿತು ತನಿಖೆ ಮಾಡಿಸಿ. ನಿಮ್ಮ ಕರ್ಮಕಾಂಡ ಏನೆಂದು ಎಲ್ಲರಿಗೂ ಗೊತ್ತಾಗಲಿ. ನಿಮ್ಮ ಬಚ್ಚಲು ಬಾಯಿಯನ್ನು ಕ್ಲೀನ್ ಮಾಡಿಕೊಳ್ಳಿ ಎಂದು ಗುಡುಗಿದರು.

ಕಾಂಗ್ರೆಸ್ ಹಿರಿಯ ನಾಯಕರ ಬಗ್ಗೆ ಲಘುವಾಗಿ ತುಚ್ಚವಾಗಿ ಮಾತಾಡುತ್ತಿರುವುದನ್ನು ಖಂಡಿಸುತ್ತೇವೆ. ರಮೇಶ್ ಜಾರಕಿಹೊಳಿ ಹೇಳಿಕೆ ಸಮರ್ಥನೆ ಮಾಡಿರುವ ಬಿಜೆಪಿ ನಡೆಯನ್ನು ಖಂಡಿಸುತ್ತೇವೆ. ರಾಜ್ಯ ಸರ್ಕಾರ ಸರಿದಾರಿಯಲ್ಲಿ ಸಾಗುತ್ತಿದೆ. ಆದರೆ ರಮೇಶ್ ಜಾರಕಿಹೊಳಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರನ್ನು ‌ರಮೇಶ್ ಜಾರಕಿಹೊಳಿ ಬೆತ್ತಲು ಮಾಡ್ತಿದಾರೆ. ರಮೇಶ್ ಜಾರಕಿಹೊಳಿಯವರ ಒಡೆತನದ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ನೂರಾರು ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡಿದ್ದು, ತನಿಖೆಗೆ ಕೋರಿದ್ದೇವೆ. ಈ ಕುರಿತು ಸದ್ಯದಲ್ಲೆ ಆಂದೋಲನ ಆರಂಭಿಸುತ್ತೇವೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ರಾಜ್ಯ ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಬಿಜೆಪಿ ಬರ ಅಧ್ಯಯನ ಸಮಿತಿ ರಚನೆ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕೇಂದ್ರದಿಂದ ನಯಾ ಪೈಸೆ ಬರ ಪರಿಹಾರ ಕೊಡಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ. ಸುಖಾ ಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ರಾಜ್ಯದ ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ರಾಜ್ಯದ ಬರ ಪರಿಸ್ಥಿತಿ ಕುರಿತು ಸಂಸದರು ಪತ್ರ ಬರೆದು ಕೇಂದ್ರದ ಗಮನ ಸೆಳೆಯಬೇಕು. ಸಂಸದ ಪ್ರತಾಪ್ ಸಿಂಹ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ರಾಜ್ಯದಲ್ಲಿ ಪ್ರತಿಪಕ್ಷ ನಾಯಕ‌ನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಮೊದಲು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ ಎಂದು ಎಂ ಲಕ್ಷ್ಮಣ್ ಟಾಂಗ್ ನೀಡಿದರು.

Key words: Ramesh Jarakiholi not - senses - KPCC spokesperson -M. Laxman

Tags :

.