HomeBreaking NewsLatest NewsPoliticsSportsCrimeCinema

ಸೆ.14 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್

11:25 AM Sep 10, 2024 IST | prashanth

ಮೈಸೂರು,ಸೆಪ್ಟಂಬರ್,10,2024 (www.justkannada.in): ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದಂತೆ ದಿನಾಂಕ 14.09.2024 ರಂದು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‌ ನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ನಗರ ಮತ್ತು ತಾಲ್ಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,17,013 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಅವುಗಳ ಪೈಕಿ 58,030 ಸಿವಿಲ್ ಪ್ರಕರಣಗಳು ಹಾಗೂ 58,983 ಕ್ರಿಮಿನಲ್ ಪ್ರಕರಣಗಳಿದ್ದು, ಪ್ರಸ್ತುತ ಸದರಿ ಪ್ರಕರಣಗಳಲ್ಲಿ 30,000 ಕ್ಕಿಂತ ಹೆಚ್ಚಿನ ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳೆಂದು ಗುರುತಿಸಲಾಗಿದೆ.

ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳಲ್ಲಾಗಲೀ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದಲ್ಲಿ, ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ.

ಲೋಕ್ ಆದಾಲತ್‌ ನ ಪ್ರಯೋಜನಗಳು

ಲೋಕ್ ಅದಾಲತ್‌ ನಲ್ಲಿ ರಾಜಿಯಾದಂತಹ ಪ್ರಕರಣಗಳಲ್ಲಿ ಮಾಡಿದ ಆವಾರ್ಡ್ / ಆದೇಶಕ್ಕೆ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸಿದ ಪ್ರಕರಣದಲ್ಲಿ ಆದ ಆದೇಶಕ್ಕೆ ಇರುವಷ್ಟೇ ಮಹತ್ವವಿರುತ್ತದೆ.

ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು.

ಸಮಯದ ಉಳಿತಾಯ ಆಗುವುದಲ್ಲದೆ, ಕಕ್ಷಿಗಾರರ ಮಧ್ಯದ ಸಂಬಂಧ ಚೆನ್ನಾಗಿ ಉಳಿಯುತ್ತದೆ ಹಾಗೂ ಯಾವುದೇ ಕೋರ್ಟ್ ಫೀಸ್ ಕೊಡಬೇಕಾಗಿಲ್ಲ.

ಪಕ್ಷಗಾರರು ನೇರವಾಗಿ ಭಾಗವಹಿಸಬಹುದು ಹಾಗೂ ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು.

ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡರೆ ಅವಾರ್ಡ್ ಮಾಡಲಾಗುವುದು, ಅದು ಸಾಮಾನ್ಯ ಡಿಕ್ರಿಯಷ್ಟೆ ಮಹತ್ವ ಪಡೆದುಕೊಂಡಿರುತ್ತದೆ.

ಪ್ರಕರಣಗಳು ರಾಜಿಯಾದಲ್ಲಿ ಶೇಕಡ 100 ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು.

ಲೋಕ್ ಅದಾಲತ್ ಆವಾರ್ಡ್ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ.

ಸದರಿ ಲೋಕ್ ಅದಾಲತ್ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಕಕ್ಷಿಗಾರರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಜಿ. ದಿನೇಶ್ ಅವರು ತಿಳಿಸಿದ್ದಾರೆ.

Key words: Rashtriya Lok Adalat, all courts, September 14

 

Tags :
all courtsRashtriya Lok AdalatSeptember 14
Next Article