ರಾಷ್ಟ್ರೀಯ ರೈತ ಸಮಾವೇಶ: ಮೈಸೂರಿನಿಂದ ತಿರುಚಿಗೆ ತೆರಳಿದ ರೈತರು
ಮೈಸೂರು,ಆಗಸ್ಟ್,26,2024 (www.justkannada.in): ತಮಿಳುನಾಡಿನ ತಿರುಚಿಯಲ್ಲಿ ನಡೆಯುವ ರಾಷ್ಟ್ರೀಯ ರೈತ ಸಮಾವೇಶಕ್ಕೆ ಕರ್ನಾಟಕದಿಂದ ನೂರಾರು ಸಂಖ್ಯೆಯ ರೈತರು ಮೈಸೂರಿನಿಂದ ರೈಲು ಮೂಲಕ ತೆರಳುತ್ತಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ದೇಶಾದ್ಯಂತ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲಮನ್ನಾ, ಡಾ. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಪ್ರಬಲಗೊಳಿಸಲು ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು. ರಾಷ್ಟ್ರದ ಎಲ್ಲಾ ರಾಜ್ಯಗಳ ರೈತ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ಮುಖಂಡ ಜಗಜಿತ್ ಸಿಂಗ್ ದಲೆವಾಲಾ. ಮತ್ತಿತರ ಮುಖಂಡರನ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದು, ಸಿಖ್ ಧರ್ಮದ ಲಾಂಛನವನ್ನು ಬಳಸದೆ ವಿಮಾನ ಪ್ರವೇಶಿಸಬೇಕೆಂದು ಪೊಲೀಸರು ಖ್ಯಾತೆ ತೆಗೆದಿದ್ದಾರೆ. ನಂತರ ಕಾಯ್ದಿರಿಸಿರುವ ವಿಮಾನ ಟಿಕೆಟ್ ರದ್ದುಗೊಳಿಸಿ ವಾಮಮಾರ್ಗದ ಮೂಲಕ ಚಳುವಳಿಯನ್ನ ಹತ್ತಿಕುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದೆ. ದಕ್ಷಿಣ ಭಾರತದಲ್ಲಿ ರೈತ ಚಳುವಳಿಯ ಪ್ರಾಬಲ್ಯವನ್ನು ತಡೆಯಲು ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುಖಂಡರಿಗೆ ತಮಿಳುನಾಡಿನ ರಾಷ್ಟ್ರೀಯ ರೈತ ಸಮಾವೇಶಕ್ಕೆ ಬರಲು ಅವಕಾಶ ಕಲ್ಪಿಸದಿದ್ದರೆ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಕುರುಬೂರ್ ಶಾಂತಕುಮಾರ್ ಎಚ್ಚರಿಸಿದರು.
ಮೇಕೆದಾಟು ಅಣೆಕಟ್ಟೆ ನಿರ್ಮಿಸಿ ಸಂಕಷ್ಟ ಕಾಲದಲ್ಲಿ ಕಾವೇರಿ ನೀರನ್ನ ಬಳಸಿಕೊಳ್ಳುವ ಬಗ್ಗೆ ತಮಿಳುನಾಡಿನ ರೈತ ಮುಖಂಡರ ಜೊತೆ ಚರ್ಚಿಸಲು ತಂಜಾವೂರಿಯಲ್ಲಿ ಎರಡು ರಾಜ್ಯಗಳ ರೈತ ಮುಖಂಡರ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
Key words: Rashtriya Raitha Conference, Tiruch, Mysore, farmer