ರಾಹುಲ್ ಗಾಂಧಿ ಸಲಹೆ ಮೇರೆಗೆ ಕೇರಳ ವ್ಯಕ್ತಿ ಕುಟುಂಬಕ್ಕೆ ಪರಿಹಾರ: ರಾಜ್ಯದ ಹಣ ದುರುಪಯೋಗ- ಬಿವೈ ವಿಜಯೇಂದ್ರ ಕಿಡಿ.
ಬೆಂಗಳೂರು, ಫೆಬ್ರವರಿ 20,2024(www.justkannada.in): ಕರ್ನಾಟಕದಲ್ಲಿ ಸೆರೆಸಿಕ್ಕಿದ್ದು ಎನ್ನಲಾದ ಆನೆಯೊಂದು ವಯನಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವುದಕ್ಕೆ ಇಲ್ಲಿನ ಕಾಂಗ್ರೆಸ್ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿದ್ದು ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಕೇರಳ ವ್ಯಕ್ತಿಯ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಆಧರಿಸಿ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ರಾಹುಲ್ ಗಾಂಧಿ ಸಲಹೆ ಮೇರೆಗೆ ಕರ್ನಾಟಕದ ತೆರಿಗೆ ಹಣವನ್ನ ದುರುಪಯೋಗಪಡಿಸಿಕೊಂಡಿದೆ. 15 ಲಕ್ಷ ರೂಪಾಯಿ ಪರಿಹಾರ ನೀಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಕಾಡಾನೆ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದರು. ಮೃತನ ಕುಟುಂಬಕ್ಕೆ ನೆರವಾಗುವಂತೆ 'ಕೈ' ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದರು. ಅದರ ಮೇರೆಗೆ ಕರ್ನಾಟಕದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಸಂಪೂರ್ಣವಾಗಿ ಅವಮಾನಕರ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಅಕ್ರಮವಾಗಿ ಹಣ ಮಂಜೂರು ಮಾಡಿದ್ದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಬರಗಾಲದಿಂದ ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ, ಸ್ವಲ್ಪವೂ ನಾಚಿಕೆಯಿಲ್ಲದೆ ರಾಜ್ಯದ ತುರ್ತು ಅಗತ್ಯಗಳತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿಯನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿರುವುದು ಖೇದಕರ. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಕರ್ನಾಟಕದ ತೆರಿಗೆದಾರರ ಹಣವನ್ನು ಅನೈತಿಕವಾಗಿ ಬಳಸಿಕೊಳ್ತಿರೋದಕ್ಕೆ ಸಿಎಂ ಹಾಗೂ ಸಚಿವರು ಹೊಣೆ ಹೊರಬೇಕು ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
Key words: Relief -Kerala man- family -Misappropriation - state funds - BY Vijayendra