For the best experience, open
https://m.justkannada.in
on your mobile browser.

ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯ:  ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು- ಸಿಎಂ ಸಿದ್ಧರಾಮಯ್ಯ

05:06 PM Nov 03, 2023 IST | prashanth
ಹೋರಾಟ ತ್ಯಾಗ ಬಲಿದಾನಗಳಿಂದ ಕನ್ನಡ ನಾಡು ಉದಯ   ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು  ಸಿಎಂ ಸಿದ್ಧರಾಮಯ್ಯ

ಗದಗ ನವೆಂಬರ್,3,2023(www.justkannada.in):  ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಗದಗದಲ್ಲಿ "ಕರ್ನಾಟಕ ಸಂಭ್ರಮ-50" ಅದ್ದೂರಿ ಕಾರ್ಯಕ್ರಮವನ್ನು ವೈಭವದ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಎಚ್.ಪಾಟೀಲ್ ಮತ್ತು ಎಲ್ಲಾ ಹೋರಾಟದ ಸಂಗಾತಿಗಳನ್ನು ಇಂದು ನಾನು ಸ್ಮರಿಸುತ್ತೇನೆ.   ಅವತ್ತು ಕೆ.ಹೆಚ್.ಪಾಟೀಲ್, ಇಂದು ಹೆಚ್.ಕೆ.ಪಾಟೀಲ್. ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯ ಅಲ್ಲ ಎಂದರು.

ಇಂಗ್ಲಿಷ್ ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಾಹರಿಸಿದರು.

ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ ಎಂದರು.

ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಈ ಸಮಾಜದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ ಎಂದರು.

ಹಿಂದೆ ಕೆ.ಹೆಚ್.ಪಾಟೀಲರು ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟರು. ಅವರ ಪುತ್ರ ಹೆಚ್.ಕೆ.ಪಾಟೀಲರೂ ಇಡೀ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿದರೆ ಸಾಕು , ನೀವೆಲ್ಲಾ ಹೆಚ್.ಕೆ.ಪಾಟೀಲರನ್ನು ಗೆಲ್ಲಿಸಬೇಕು. ಇಡೀ ರಾಜ್ಯಕ್ಕೆ ಅಷ್ಟೊಂದು ಕೆಲಸ ಮಾಡಿರುವ ಹೆಚ್.ಕೆ.ಪಾಟೀಲರು ಮತ ಕೇಳಬಾರದು. ನೀವೆಲ್ಲಾ ಅವರನ್ನೂ ಹಾಗೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅವಳಿ ನಗರಕ್ಕೆ 61 ಕೋಟಿ ಕೊಟ್ಟಿದ್ದೇವೆ. ಅಗತ್ಯಬಿದ್ದರೆ ಮತ್ತೆ ಕೊಡುತ್ತೇವೆ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸಲು ಈಗಾಗಲೇ 61 ಕೋಟಿ ನೀಡಿದ್ದೇವೆ. ಅಗತ್ಯಬಿದ್ದರೆ ಮತ್ತಷ್ಟು ಹಣ ಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವಾಸೋದ್ಯಮ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಎಚ್.ಕೆ.ಪಾಟೀಲ್ ಅವರು ವಹಿಸಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಂಕಳ ವೈದ್ಯ, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿ ಹಲವಾರು ಶಾಸಕರು, ಇಲಾಖಾ ಕಾರ್ಯದರ್ಶಿಗಳು-ಅಧಿಕಾರಿಗಳು ಉಪಸ್ಥಿತರಿದ್ದರು.

Key words: Rise - Kannada -nation - struggle-sacrifice- CM Siddaramaiah

Tags :

.