For the best experience, open
https://m.justkannada.in
on your mobile browser.

'ಸಾಲರಾಮಯ್ಯನ ಸೋಗಲಾಡಿ' ಬಜೆಟ್- ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ.

04:31 PM Feb 16, 2024 IST | prashanth
 ಸಾಲರಾಮಯ್ಯನ ಸೋಗಲಾಡಿ  ಬಜೆಟ್  ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ

ಬೆಂಗಳೂರು,ಫೆಬ್ರವರಿ,16,2024(www.justkannada.in): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, 'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಸಾಂವಿಧಾನಿಕ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘’ಅಡ್ಡಕಸುಬಿ’’ ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಕಿಡಿಕಾರಿದ್ದಾರೆ.

ಸಾಧನೆಯ ಬಲದಿಂದಾಗಲಿ, ಅಭಿವೃದ್ಧಿ ಕೆಲಸಗಳಿಂದಾಗಲಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ತಿಳಿದಿರುವ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡನೆಯ ಪವಿತ್ರ ಸಾಂವಿಧಾನಿಕ ಕರ್ತವ್ಯವನ್ನ ಚುನಾವಣಾ ಭಾಷಣದಂತೆ ದುರ್ಬಳಕೆ ಮಾಡಿಕೊಂಡು ಸಂವಿಧಾನಕ್ಕೆ ಮತ್ತು ಮತ ನೀಡಿ ಅಧಿಕಾರ ಕೊಟ್ಟ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ಅತಿದೊಡ್ಡ ಸಾಧನೆ ಎಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ₹44,000ಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಆ ಭಾಗ್ಯ ಈ ಭಾಗ್ಯ ಎಂದು ಎಂದು ರಾಜ್ಯದ ಜನತೆಯ ಮೇಲೆ ಸಾಲ ಭಾಗ್ಯ ಹೊರಿಸಿ ಹಳಿ ತಪ್ಪಿಸಿದ್ದ ರಾಜ್ಯದ ವಿತ್ತೀಯ ಶಿಸ್ತನ್ನ, ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿದಾರಿಗೆ ತಂದಿತ್ತು.

ಆದರೆ ಈಗ ತಮ್ಮ ಎರಡನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯನವರು ಕರ್ನಾಟಕವನ್ನ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ. "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು" ಎಂಬುದು ಈ ಸರ್ಕಾರದಲ್ಲಿ "ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ" ಎಂಬಂತಾಗಿದೆ ಎಂದು ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ಮುಖ್ಯಮಂತ್ರಿ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು‌‌ 'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

Key words: 'Salaramayya's Sogaladi- Budget - Opposition leader- R. Ashok

Tags :

.