For the best experience, open
https://m.justkannada.in
on your mobile browser.

SC, ST ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು: ತೀರ್ಪು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

06:06 PM Aug 01, 2024 IST | prashanth
sc  st ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು  ತೀರ್ಪು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,1,2024 (www.justkannada.in): ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿಗೆ ಒಪ್ಪಿಗೆ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದ್ದಾಗಿದೆ. ನ್ಯಾಯಾಲಯದ ಈ ತೀರ್ಪನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ.

ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನದ ಹಾದಿಯಲ್ಲಿನ ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ. ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶವೂ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಹಿಂದೆ ಕಾಂಗ್ರೆಸ್ ಪಕ್ಷವೇ ರಚಿಸಿದ್ದ ನ್ಯಾ.ಎ.ಜೆ.ಸದಾಶಿವ ಅವರ ಅಧ್ಯಕ್ಷತೆಯ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗೆ ಸರ್ಕಾರ ಬದ್ಧವಾಗಿದೆ.

ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಒಳಮೀಸಲಾತಿ ಬಗ್ಗೆ ಅವಸರದಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನುಷ್ಠಾನಗೊಳಿಸಬಹುದು ಎಂದು ಕೇಂದ್ರ ಸರ್ಕಾರವೇ ರಚಿಸಿದ್ದ ಉಷಾ ಮೆಹ್ರಾ ಸಮಿತಿ ಸ್ಪಷ್ಟವಾಗಿ ತಿಳಿಸಿದ್ದರೂ ಕೇಂದ್ರ ಸರ್ಕಾರ ಇಲ್ಲಿಯವರೆಗೆ ತೀರ್ಮಾನ ಕೈಗೊಳ್ಳದೆ ಮೂಲೆಗೆ ಸರಿಸಿತ್ತು.

ಈಗಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಅಗತ್ಯ ಬಿದ್ದರೆ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಾಲೋಚನೆ-ಸಂಧಾನದ ಮೂಲಕ ಒಳಮೀಸಲಾತಿ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: SC, ST,  internal reservation , Supreme Court,  CM Siddaramaiah

Tags :

.