ಶಿರಾಡ್ ಘಾಟ್ ಗುಡ್ಡ ಕುಸಿತ : ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗೆ ಸಿಎಂ ಫುಲ್ ಕ್ಲಾಸ್..
ಶಿರಾಡಿ ಘಾಟ್ ಆ 3,2024: (www.justkannada.in news) ಶಿರಾಡ್ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಶಾಕ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು.
ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಆಕ್ಷೇಪಿಸಿ, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂ ಗೆ ವಿವರಿಸುತ್ತಾ, "ಒಟ್ಟು 45 km ನಲ್ಲಿ 35 km ಹೈವೇ ಕಾಮಗಾರಿ ಮುಗಿದಿದೆ. 10 km ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಂತೆ ಇಲ್ಲ" ಎಂದು ವಿವರಿಸಿದರು.
ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ SDRF ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು.
ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರ ಮುಂದೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟರು...
*ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಗೊಳಿಸಿಕೊಳ್ಳುವುದು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?
*ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತಲ್ಲವೇ?
*ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ ಎಂದು ಪ್ರಶ್ನಿಸಿದರು.
ವಿಲಾಸ್ ಅವರಿಂದ ಸೂಕ್ತ ಉತ್ತರ ಬರದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್ , ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳ ತಂಡವೇ ಸ್ಥಳದಲ್ಲಿತ್ತು.
key words: Shiradi Ghat landslide, CM, gives full class, to Regional Officer, of Highways Authority of India