For the best experience, open
https://m.justkannada.in
on your mobile browser.

ರಾಜ್ಯಕ್ಕೆ ಅನುದಾನದ ಕೊರತೆ: ಸರಿದೂಗಿಸಲು 16ನೇ ಹಣಕಾಸು ಆಯೋಗ ಸಕಾರಾತ್ಮಕ ಸ್ಪಂದನೆ- ಸಿಎಂ ಸಿದ್ದರಾಮಯ್ಯ

03:56 PM Aug 29, 2024 IST | prashanth
ರಾಜ್ಯಕ್ಕೆ ಅನುದಾನದ ಕೊರತೆ  ಸರಿದೂಗಿಸಲು 16ನೇ ಹಣಕಾಸು ಆಯೋಗ ಸಕಾರಾತ್ಮಕ ಸ್ಪಂದನೆ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್ 29,2024 (www.justkannada.in): ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ  ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80,000 ಕೋಟಿ ಅನುದಾನ ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕೆಂದು 16ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು  ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿವಿಸಿಬಲ್ ಪೂಲ್ ಗೆ ಸೆಸ್ ಮತ್ತು ಸರ್ಜಾಜ್ ನ್ನು ಸೇರಿಸಬೇಕೆಂದು ಹಾಗೂ ಭಾರತ ಸರ್ಕಾರಕ್ಕೆ ಬರುವ ತೆರಿಗೆಯೇತರ ಆದಾಯವನ್ನೂ ಸಹ  ಡಿವಿಸಿಬಲ್ ಪೂಲ್ ಗೆ ಸೇರಿಸಬೇಕೆಂದು ಕೋರಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ 5000 ಕೋಟಿ ಯಂತೆ ಐದು ವರ್ಷಕ್ಕೆ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುರೂಪದ ಅನುದಾನ ನೀಡಬೇಕೆಂದು ಕೋರಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸುಮಾರು 55,000 ಕೋಟಿ ರೂ. ವೆಚ್ಚವಾಗಲಿದ್ದು, ಈ ಮೊತ್ತದ ಅರ್ಧದಷ್ಟಾದರೂ ಅನುದಾನ ನೀಡಬೇಕೆಂದು ಕೋರಲಾಗಿದೆ ಎಂದರು.

ಪಶ್ಚಿಮ ಘಟ್ಟ ವಿಪತ್ತು ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಕೋರಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳಿಗೆ ದಂಡವಿಧಿಸಬಾರದು.  ದೇಶದ ಜಿಡಿಪಿಗೆ ನಮ್ಮ ರಾಜ್ಯದಿಂದ ಶೇ.9 ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿ ನಮಗೆ ಕೇವಲ ಶೇ. 1.5 ರಷ್ಟು ಮಾತ್ರ ರಾಜ್ಯದ ಪಾಲಿಗೆ ಬರುತ್ತಿದೆ. ಇದನ್ನು ಸರಿಪಡಿಸಲು ಕೋರಲಾಗಿದೆ. 14 ನೇ ಹಣಕಾಸು ಆಯೋಗದಲ್ಲಿ  ರಾಜ್ಯಕ್ಕೆ 4.713  ಪ್ರಮಾಣದ ತೆರಿಗೆ ಹಂಚಿಕೆಯಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಈ ಪ್ರಮಾಣ 3.647 ಕ್ಕೆ ಇಳಿದಿದ್ದು, ಈ ಪ್ರಮಾಣವನ್ನೂ ಸರಿಪಡಿಸಬೇಕೆಂದು ಕೋರಲಾಗಿದೆ. ತೆರಿಗೆ ಪ್ರಮಾಣದಲ್ಲಿ 1.66 % ಕಡಿಮೆಯಾಗಿರುವ ಬಗ್ಗೆ ಆಯೋಗಕ್ಕೆ ವಿವರಣೆ ನೀಡಲಾಗಿದೆ ಎಂದರು.

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ತೆರಿಗೆ ಹಂಚಿಕೆಯಲ್ಲಿ ಶೇ. 50 ರಷ್ಟು ಪಾಲಿಗೆ ಬೇಡಿಕೆಯಿಟ್ಟಿದ್ದರು.  ಅನೇಕ ರಾಜ್ಯಗಳು ಈ ರೀತಿ ಬೇಡಿಕೆ ಸಲ್ಲಿಸಿರುವುದರಿಂದ , ಕರ್ನಾಟಕದ ಬೇಡಿಕೆಯನ್ನು ಈಡೇರಿಸಬಹುದೆಂಬ ವಿಶ್ವಾಸವಿದೆ ಎಂದರು.

Key words: Shortage, funds, 16th Finance Commission, CM Siddaramaiah

Tags :

.