For the best experience, open
https://m.justkannada.in
on your mobile browser.

ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ: ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ- ಸಚಿವ ಮಧು ಬಂಗಾರಪ್ಪ.

01:48 PM May 28, 2024 IST | prashanth
ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ  ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ  ಸಚಿವ ಮಧು ಬಂಗಾರಪ್ಪ

ಮೈಸೂರು,ಮೇ,28,2024 (www.justkannada.in): ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದೆ. 12 ಸಾವಿರ ಶಿಕ್ಷಕರನ್ನ ಈಗ ನೇಮಕ ಮಾಡಲಾಗಿದ್ದು ಹಂತಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆ ಕಾರಣ. ಅದೇ ರೀತಿ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಪರಿಷತ್ ಚುನಾವಣೆ ಅಭ್ಯರ್ಥಿಗಳ ಪರವಾಗಿ ಮತಯಾಚನೆಗೆ ಬಂದಿದ್ದೇನೆ.ಮರಿತಿಬ್ಬೆಗೌಡರು ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸದನದಲ್ಲಿ ಮರಿತಿಬ್ಬೆಗೌಡರು ಹೋರಾಟ ಮಾಡುತ್ತಾರೆ ಎಂದರು.

ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದೆ. 12 ಸಾವಿರ ಶಿಕ್ಷಕರನ್ನ ಈಗ ನೇಮಕ ಮಾಡಲಾಗಿದೆ. ಅನುದಾನಿತ ಶಾಲೆಗಳ 6 ಸಾವಿರ ಶಿಕ್ಷಕರ ನೇಮಕಾತಿಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ಸಮಸ್ಯೆಯನ್ನ ಬಗೆಹರಿಸುತ್ತೇವೆ. ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿ ಕ್ರಮ

ಎಸ್ಎಸ್ಎಲ್ ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಈ ನಿರ್ಧಾರದಿಂದ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಬಂದಿದೆ. 42 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಎಸ್ಎಸ್ಎಲ್ ಸಿ ಯಲ್ಲಿ ಫೇಲಾದ ವಿದ್ಯಾರ್ಥಿಗಳು ಶಾಲೆಯಿಂದ ಹಿಂದೆ ಉಳಿಯುತ್ತಿದ್ದರು. ನಮ್ಮ ಈ ನಿರ್ಧಾರದಿಂದ ಮಕ್ಕಳು ಮತ್ತೆ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಶಾಲಾ ಕಾಲೇಜು ಆರಂಭ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಶಾಲಾ ಮಕ್ಕಳ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈಗಾಗಲೇ 95% ರಷ್ಟು ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಮಾಡಲಾಗಿದೆ. ಈ ತಿಂಗಳ ಒಳಗೆ 100% ವಿತರಣೆ ಮಾಡುತ್ತೇವೆ ಎಂದರು.

ಶಿಕ್ಷಕರ ಚುನಾವಣೆಯಲ್ಲಿ ಶಿಕ್ಷಕರಿಗೆ ಒತ್ತಡ ವಿಚಾರ.  ನಾವು ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಒತ್ತಡ ಹಾಕುತ್ತಿಲ್ಲ. ಈ ಹಿಂದೆ ಈ ಸಿಸ್ಟಮ್ ಇತ್ತು. ಶಿಕ್ಷಕರ ಮೇಲೆ ಪ್ರಭಾವ ಬಳಸಿ ಮತ ಹಾಕಿಸಲಿಕ್ಕೆ ಮುಂದಾಗುತ್ತಿದ್ದರು. ಯಾರೇ ಶಿಕ್ಷಕರಾಗಲಿ ಶಿಕ್ಷಣದ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು. ಇಲ್ಲಿ ಯಾರು ಕೂಡ ರಾಜಕೀಯ ಬಳಸಬಾರದು. ಒಂದು ವೇಳೆ ರಾಜಕೀಯ ವಿಚಾರಗಳಲ್ಲಿ ಭಾಗಿಯಾಗ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಬಿಜೆಪಿಯವರು ನನ್ನ ಕೂದಲಿ ಬಗ್ಗೆ ಮಾತಾಡಿ 26ರಿಂದ 6 ಸ್ಥಾನಕ್ಕೆ ಬರ್ತಾರೆ ನೋಡಿ

ವಿಧಾನಸಭೆ ಚುನಾವಣೆ ವೇಳೆ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ ಬಿಜೆಪಿ 130 ರಿಂದ 60 ಕ್ಕೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26 ರಿಂದ 6 ಕ್ಕೆ ಬರುತ್ತಾರೆ ನೋಡಿ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.

ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಅವರು ಮಾತಾಡಿದ್ರಾ? ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ? ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಹೇರ್ ಸ್ಟೈಲ್ ನಲ್ಲಿದ್ದಾರೆ ನಮಗ್ಯಾಕೆ ಆ ಥರ ಸ್ಟೈಲ್ ನಲ್ಲಿ ಬಿಡೋಕೆ ಅವಕಾಶ ಇಲ್ಲ ಅಂತಾ ಕೇಳುತ್ತಾರೆ ಏನೂ ಮಾಡಲಿ ಹೇಳಿ? 40% ಕಮೀಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಹೇರ್ ಕಟ್ ಮಾಡಲು ಅದು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ತಜ್ಞತೆ ನೋಡಿ ಆ ಕೆಲಸ ಕೊಡುತ್ತೇನೆ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ದಿ ಇಲ್ಲ. ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ಇವರು ಯಾರೋ ಮಾತು ನಾನು ಕೇಳಲ್ಲ. ಜೂನ್  4 ಆಗಲಿ ನಂತರ ವಿಜಯೇಂದ್ರ ಅವರಿಗೆ ಬೇರೆಯದೆ ಕೆಲಸ ಕೊಡ್ತಿನಿ ಎಂದು ಮಧು ಬಂಗಾರಪ್ಪ ಟಾಂಗ್ ಕೊಟ್ಟರು.

ನಾನು ಸವಿತಾ ಸಮಾಜಕ್ಕೆ ಅವಮಾನ ಆಗುವ ರೀತಿ ಮಾತಾಡಿಲ್ಲ. ನಾನು ವಿಜಯೇಂದ್ರ ಗೆ ಉತ್ತರ ಕೊಟ್ಟಿದ್ದಕ್ಕೆ ಇವರು ಯಾಕೆ ಪ್ರತಿಭಟನೆ ಮಾಡಬೇಕು. ಯಾವುದೇ ಸಮಾಜಕ್ಕೆ ಅವಮಾನ‌ ಮಾಡುವ ರೀತಿ ನಡವಳಿಕೆಯನ್ನು ನನ್ನ ತಂದೆ ಅವರು ನನಗೆ ಹೇಳಿ ಕೊಟ್ಟಿಲ್ಲ. ಯಾರೋ ಅವರಿಗೆ ಮಿಸ್ ಲೀಡ್ ಮಾಡಿರಬೇಕು ಎಂದರು.

Key words: Shortage, teacher,  Minister , Madhu Bangarappa

Tags :

.