ಸಾಮಾಜಿಕ ನ್ಯಾಯದ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದ ವ್ಯಕ್ತಿ ಶ್ರೀನಿವಾಸ್ ಪ್ರಸಾದ್- ಸಿಎಂ ಸಿದ್ದರಾಮಯ್ಯ ನುಡಿ.
ಮೈಸೂರು,ಮೇ,11,2024 (www.justkannada.in): ಶ್ರೀನಿವಾಸ್ ಪ್ರಸಾದ್ ಒಬ್ಬ ಸ್ವಾಭಿಮಾನಿ ಸಜ್ಜನ ರಾಜಕಾರಣಿ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಗುಣಗಾನ ಮಾಡಿದರು.
ದಿ. ವಿ. ಶ್ರೀನಿವಾಸ್ ಪ್ರಸಾದ್ ಶ್ರದ್ಧಾಂಜಲಿ
ಶ್ರೀನಿವಾಸ್ ಪ್ರಸಾದ್ ಒಬ್ಬ ಮನುಷ್ಯ ಹಾಗಾಗಿ ಮನುಷ್ಯತ್ವದ ಬಗ್ಗೆ ಗೌರವ ಇಟ್ಟುಕೊಂಡಿದ್ದವರು. ಬೇರೆ ಪಕ್ಷದಲ್ಲಿದ್ದರೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳಿಗೆ ಮಾರು ಹೋಗಿದ್ದವರು ಸಂವಿಧಾನದ ಬಗ್ಗೆ ಅಪಾರ ಗೌರವ ಇದ್ದವರು. ಸಂವಿಧಾನದಲ್ಲಿ ಅವಕಾಶದಿಂದ ವಂಚಿತರಾದವರಿಗೆ ಸಮಾನ ಅವಕಾಶಗಳನ್ನ ಕೊಡಬೇಕು ಎಂಬಲ್ಲಿ, ಸಾಮಾಜಿಕ ನ್ಯಾಯದ ಬಗ್ಗೆ ಅಪಾರವಾದ ನಂಬಿಕೆ ಇಟ್ಟುಕೊಂಡವರು. ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಲ್ಲಿ ಯಾರಿಗೆ ಕ್ಲಾರಿಟಿ ಇರುತ್ತೋ ಅವರು ಸ್ವಾಭಿಮಾನಿಗಳಾಗಿರುತ್ತಾರೆ,. ಮನುಷ್ಯತ್ವದ ಗುಣಗಳನ್ನು ಹೊಂದಿರುತ್ತಾರೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಬಹುದು ಆದರೆ ಸ್ನೇಹಕ್ಕೆ ಧಕ್ಕೆ ಆಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೆಲುಕು ಹಾಕಿದರು.
ಇತ್ತೀಚೆಗೆ ನಾನು ಅವರನ್ನ ಭೇಟಿ ಮಾಡಿ ಬಂದಿದ್ದೆ. ನನ್ನ ಅವರ ಭೇಟಿ ರಾಜಕೀಯ ಭೇಟಿ ಆಗಿರಲಿಲ್ಲ, ಸುಮಾರು ಅರ್ಧ ಗಂಟೆ ಕೂತು ಮಾತನಾಡಿದ್ದೆ. ಆಗ ಮೊದಲಿನಂತೆ ಆತ್ಮೀಯವಾಗಿ ಬರಮಾಡಿಕೊಂಡು ಆತ್ಮೀಯವಾಗಿ ಮಾತನಾಡಿದರು. ಕೊನೇ ಕೊನೆಯಲ್ಲಿ ರಾಜಕೀಯದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಂತೆ ಮಾತಾಡುತ್ತಿದ್ದರು. ಧಕ್ಕೆಯಾದಾಗ ಮಾತ್ರ ಅವರು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಬಡವರು, ದಲಿತರು, ಹಿಂದುಳಿದವರಿಗೆ ಯಾವಾಗಲೂ ಸ್ವಾಭಿಮಾನ ಅನ್ನುವುದು ಇರಲೇ ಬೇಕು. ಇಲ್ಲ ಅಂದ್ರೆ ಗುಲಾಮಗಿರಿ ಅನುಭವಿಸಬೇಕಾಗುತ್ತದೆ. ತಮ್ಮ ಬದುಕಿನುದ್ದಕ್ಕೂ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ ಶ್ರೀನಿವಾಸ್ ಪ್ರಸಾದ್. ಹಳೆ ತಲೆಮಾರಿನ ರಾಜಕಾರಣಿಗಳ ಕೊಂಡಿ ಕಳಚಿದೆ. ಅವರ ಹೋರಾಟದ ಬದುಕು ಇವತ್ತಿನ ಯುವಕರಿಗೆ ಆದರ್ಶ ಪ್ರಾಯವಾಗಿದೆ. ಅವರ ಜೀವನ ಸಾರ್ಥಕವಾದ ಜೀವನ. ಅವರ ಕುಟುಂಬಕ್ಕೆ ಅವರ ಅಗಲಿಕೆ ನೋವು ಭರಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ ಕೊನೆಗೆ ಜೈಭೀಮ್ ಎಂದು ಹೇಳಿದರು.
Key words: Shrinivas Prasad, CM Siddaramaiah, social justice