For the best experience, open
https://m.justkannada.in
on your mobile browser.

ನಾನೇ ಸಿಎಂ ಎನ್ನುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯ.

01:19 PM Nov 03, 2023 IST | prashanth
ನಾನೇ ಸಿಎಂ ಎನ್ನುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯ

ಬೆಂಗಳೂರು ನವೆಂಬರ್,3,2023(www.justkannada.in): ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,  ನಾನೇ ಸಿಎಂ ಎನ್ನುವ ದೌರ್ಭಾಗ್ಯ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ,  ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಂದು ಸಿದ್ಧರಾಮಯ್ಯ ಹೇಳಿಕೆ ನೀಡಿದ ದಿನದಿಂದಲೇ ಕಾಂಗ್ರೆಸ್ ಸರ್ಕಾರದ ಅವನತಿ ಅಧಿಕೃತವಾಗಿ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್​  ಹೇಳಿದ್ದಾರೆ.  ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲ್ಲ ಎಂಬವುದು ಡಿಕೆ ಶಿವಕುಮಾರ್​ ಅವರ ಮಾತಿನ ಅರ್ಥ.  ಕರ್ನಾಟಕದ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೆ ಅಂತಾ ಹೇಳಿದ್ದೆ. ಅಜಿತ್ ಪವಾರ್ ​​ಗಳು ಬಹಳ ಜನ ಹುಟ್ಟಿಕೊಂಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಹಿರಂಗ ಹೇಳಿಕೆ ಕೊಡದಂತೆ ಕಾಂಗ್ರೆಸ್​​ ನಾಯಕರು ಸೂಚಿಸಿದ್ದರು. ಅವರು ಬಂದು ಹಫ್ತಾ ವಸೂಲಿ ಮಾಡಿಕೊಂಡು ಹೋದರು. ಮರುದಿನವೇ ಅಸಮಾಧಾನ ಸ್ಫೋಟವಾಗಿದೆ. ಇದು ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ. ಸಿಎಂ ಗೌರವಯುತವಾಗಿ ರಾಜೀನಾಮೆ ಕೊಡುವುದು ಒಳ್ಳೆಯದು. ಇಲ್ಲದಿದ್ದರೆ ಮಂತ್ರಿಗಳು, ಶಾಸಕರೇ ಸರ್ಕಾರ ಬೀಳಿಸುತ್ತಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಪರಮೇಶ್ವರ್ ಗೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ,  ಇಷ್ಟು ದಿನ ಸಿದ್ದರಾಮಯ್ಯ ಸಿದ್ದರಾಮಯ್ಯ ಅಂತಾ ಬೆಂಕಿ ಹಚ್ಚಿದ್ರು ಈಗ ರಾಜಣ್ಣ ಸಿದ್ದರಾಮಯ್ಯರನ್ನ ಬಿಟ್ಟು ಪರಮೇಶ್ವರ್ ಪರ ನಿಂತ್ರೆ ಹೇಗೆ..? ಕಾಂಗ್ರೆಸ್ ಹೈಕಮಾಂಡ್ ಏನು ಸತ್ತು ಹೋಗಿದೆಯಾ..?  ಎಂದು ಟಾಂಗ್ ನೀಡಿದರು.

Key words: Siddaramaiah - misfortune - CM -former minister- KS Eshwarappa

Tags :

.