For the best experience, open
https://m.justkannada.in
on your mobile browser.

ನರೇಗಾ ಮತ್ತು ಪಿಂಚಣಿ ಹಣವನ್ನ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಆದೇಶ ನೀಡಲಿ- ಆರ್.ಅಶೋಕ್ ಆಗ್ರಹ.

12:18 PM May 17, 2024 IST | prashanth
ನರೇಗಾ ಮತ್ತು ಪಿಂಚಣಿ ಹಣವನ್ನ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಆದೇಶ ನೀಡಲಿ  ಆರ್ ಅಶೋಕ್ ಆಗ್ರಹ

ಬೆಂಗಳೂರು, ಮೇ, 17,2024 (www.justkannada.in):  ರೈತ ವಿರೋಧಿ, ಕಣ್ಣು, ಕಿವಿ, ಹೃದಯ ಇಲ್ಲದ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿದೆ. ಕೂಡಲೇ ರೈತರ ಹಣ ಜಮೆ ಮಾಡಿಕೊಳ್ಳದಂತೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಕೂಡಲೇ ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್ ಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ. ಬ್ಯಾಂಕ್ ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗಾಗಿ 3,454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆಗೊಳಿಸಿದೆ. ಆದರೆ ಸಿಎಂ ಸಿದ್ದರಾಮಯ್ಯನವರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿಲ್ಲ. ಕೇಂದ್ರ ಸರ್ಕಾರ ನೀಡಿದ ಹಣವನ್ನು ಕೂಡ ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ತಕ್ಷಣದ ಕ್ರಮ ವಹಿಸದೆ ಕೈ ಕಟ್ಟಿ ಕುಳಿತಿತ್ತು. ಈಗ ಪಿಂಚಣಿ, ನರೇಗಾ ಹಣವೂ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಹಿಂದಿನ ಬಿಜೆಪಿ ಸರ್ಕಾರ ಪ್ರವಾಹ ವಿಕೋಪದಿಂದ ಹಾನಿಗೊಳಗಾದವರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು. ಈಗ ಪಾಪರ್ ಆಗಿ ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಷ್ಟು ಉಳಿದಿದೆ ಎಂದು ಎಣಿಸುತ್ತಿರುವ ಸಿಎಂ  ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೂ ಮಿಡಿಯದೆ ಸುಮ್ಮನಿದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words:  Siddaramaiah, Narega, pension, farmer,  R.Ashok

Tags :

.