For the best experience, open
https://m.justkannada.in
on your mobile browser.

ಮುಡಾ ಸಭೆಯಲ್ಲಿ ಚರ್ಚೆ ಆಗದೇ ಸೈಟ್ ಹಂಚಿಕೆ: 10 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿ-ಎಂಎಲ್ ಸಿ ರವಿಕುಮಾರ್

04:17 PM Aug 30, 2024 IST | prashanth
ಮುಡಾ ಸಭೆಯಲ್ಲಿ ಚರ್ಚೆ ಆಗದೇ ಸೈಟ್ ಹಂಚಿಕೆ  10 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿ ಎಂಎಲ್ ಸಿ ರವಿಕುಮಾರ್

ಬೆಂಗಳೂರು,ಆಗಸ್ಟ್, 30,2024 (www.justkannada.in): 2020ರ ಮುಡಾ ಸಭೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡುವ ಬಗ್ಗೆ ನಿರ್ಣಯ ಆಗಿದೆ ಎನ್ನುತ್ತಿದ್ದಾರೆ. ಆದರೆ, ಅಂದಿನ ಸಭೆಯಲ್ಲಿ ಆ ಬಗ್ಗೆ ಚರ್ಚೆಯೇ ಆಗಿಲ್ಲ ಸಿದ್ದರಾಮಯ್ಯನವರ ಪತ್ನಿಗೆ ಸೇರಿದ 14 ನಿವೇಶನ ಸೇರಿದಂತೆ ಈವರೆಗೆ ನೀಡಲಾಗಿರುವ ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಪ್ರಾಧಿಕಾರದ ಸಭೆಗೂ ತಾರದೇ, ಸರ್ಕಾರಕ್ಕೂ ತಿಳಿಸದೇ ಲೂಟಿ ಮಾಡಲಾಗಿದೆ. ಈ ಲೂಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣೆಯಾಗಿ ನಿಂತಿದ್ದಾರೆ ಎಂದು  ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್  ಆರೋಪಿಸಿದರು.

ಈ ಸಂಬಂಧ ಇಂದು ಸುದ್ಧಿಗೋಷ್ಠಿ ನಡೆಸಿ  2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿ ಮತ್ತು ಆಡಿಯೋ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಎಂಎಲ್ ಸಿ ರವಿಕುಮಾರ್, 2009 ರ ನಿಯಮ ಪ್ರಕಾರ ಭೂ ಮಾಲೀಕರು ಶೇ. 60:40 ರ ಅನುಪಾತದಲ್ಲಿ ಪ್ರೋತ್ಸಾಹದಾಯಕ ನಿವೇಶನ ನೀಡಿ ಬಡಾವಣೆ ನಿರ್ಮಿಸಲು ಅವಕಾಶವಿರುತ್ತದೆ.  ಜನರಿಗೆ ವಸತಿ ನೀಡುವ ಉದ್ದೇಶದಿಂದ ಹಾಗೂ ರೈತರಿಗೆ ನಷ್ಟವಾಗದ ರೀತಿಯಲ್ಲಿ ಯೋಜನೆ ಜಾರಿಗೊಳಿಸುವುದು ಈ ನಿಯಮ ರೂಪಿಸಿರುವುದರ ಹಿಂದಿನ ಉದ್ದೇಶವಾಗಿರುತ್ತದೆ.  2009 ರ ನಿಯಮವನ್ನು ಬಳಸಿಕೊಂಡು ರಾಜ್ಯದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರಗಳು ಬಡಾವಣೆ ರಚಿಸುವಲ್ಲಿ ಆಸಕ್ತಿ ತೋರದಿರುವುದು ಅಥವಾ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಅದಕ್ಕೆ ಮಾರ್ಪಾಡು ತಂದು 2015 ರಲ್ಲಿ ಶೇ 50:50 ರ ಅನುಪಾತದಲ್ಲಿ ಜಮೀನು ಕೊಡಮಾಡುವವರಿಗೆ ನಿವೇಶನ ನೀಡುವ ತಿದ್ದುಪಡಿಯನ್ನು ತರಲಾಗುತ್ತದೆ. ಈ ನಿಯಮ ಏನಿದ್ದರೂ 2009 ರ ನಂತರ ರಚಿತವಾಗುವ ಬಡಾವಣೆಗಳಲ್ಲಿ ಭೂಮಿ ನೀಡುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದರು.

ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿನಾಂಕ : 14-09-2020 ರ ಸಭೆಯಲ್ಲಿ ನಿಯಮಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ ಬಡಾವಣೆ ನಿರ್ಮಾಣಕ್ಕಾಗಿ ಬಳಸಿಕೊಂಡಿದ್ದರೆ ಹಾಗೂ ಈ ಜಮೀನುಗಳಿಗೆ ಪರಿಹಾರ ನೀಡದೇ ಇದ್ದರೆ ಶೇ 50:50 ರ ಅನುಪಾತದಲ್ಲಿ ಪರಿಹಾರ ರೂಪದಲ್ಲಿ ನಿವೇಶನ ನೀಡುವ ನಿರ್ಣಯ ಕೈಗೊಳ್ಳುತ್ತದೆ. ಆದರೆ ಈ ನಿರ್ಣಯಕ್ಕೆ ಸರ್ಕಾರದ ಅನುಮತಿ ದೊರೆಯುವುದಿಲ್ಲವಾದ್ದರಿಂದ, ಇದು ನಿಯಮ ಬಾಹಿರವೂ ಆಗಿರುವುದರಿಂದ ಮುಂದೆ ಸರ್ಕಾರ ಈ ನಿರ್ಣಯವನ್ನು (ದಿನಾಂಕ : 27-10-2023 ರಂದು) ರದ್ದು ಮಾಡುತ್ತದೆ. ಈ ನಿರ್ಣಯವನ್ನು ಬಳಸಿಕೊಂಡು ಶೇ 50:50 ರ ಅನುಪಾತದ ನಿವೇಶನಗಳನ್ನು ವಿತರಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗುವುದಿಲ್ಲ.

ಆದರೆ 20-11-2020 ರಂದು ವಿಷಯ ಸಂಖ್ಯೆ 5 ರಲ್ಲಿ ಶೇ 50:50 ಅನುಪಾತದ ನಿವೇಶನ ನೀಡುವ ಸಂಬಂಧ ಮತ್ತೆ ವಿಷಯವನ್ನು ಸಭೆಗೆ ಮಂಡಿಸಲಾಗುತ್ತದೆ. ಆದರೆ ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗುತ್ತದೆಯಾದರೂ ಶೇ 50:50 ರ ಅನುಪಾತದ ನಿವೇಶನ ನೀಡಲು ನಿರ್ಣಯಿಸಲಾಗುವುದಿಲ್ಲ. ಆದರೆ ಶೇ  50:50 ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲು  ತೀರ್ಮಾನಿಸಲಾಗಿದೆ ಎಂಬ ನಿರ್ಣಯವನ್ನುಸಭೆಯ ನಡವಳಿಕೆಗೆ ವಿರುದ್ಧವಾಗಿ ಅಧ್ಯಕ್ಷರು ಹಾಗೂ ಆಯುಕ್ತರು ಸೇರಿಕೊಂಡು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನಿರ್ಣಯಮಾಡಿ ಟಿಪ್ಪಣಿಗೆ ಸಹಿ ಮಾಡುತ್ತಾರೆ.

ಸದರಿ ನಿರ್ಣಯ ಪ್ರಾಧಿಕಾರದ ಸಭೆಯಲ್ಲಿ ಅಂಗೀಕೃತವಾಗದೇ ಮುಂದಿನ ಸಭೆಯಲ್ಲಿ ಚರ್ಚಿಸಲು ಮತ್ತೆ ಮಂಡಿಸುವಂತೆ ಸಲಹೆ ನೀಡಿ ಮುಂದೂಡಲಾಗುತ್ತದೆ ಎನ್ನುವುದಕ್ಕೆ ಇಂದು ನಾವು ಬಿಡುಗಡೆ ಮಾಡಿರುವ ಅಧೀಕೃತ ಆಡಿಯೋ (ಧ್ವನಿಮುದ್ರಿಕೆ) ಸ್ಪಷ್ಟವಾದ ಸಾಕ್ಷಿ ನೀಡುತ್ತಿದೆ. ಅಂದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಕ್ಕೆ ವಿರುದ್ಧವಾಗಿ ಸರ್ಕಾರ ನಿರ್ಣಯವನ್ನು ರದ್ದುಪಡಿಸಿದರೂ, ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟವಾಗಿ ಎಚ್ಚರಿಸಿದರೂ, ಮುಂದೂಡಲಾದ ವಿಷಯವನ್ನು ನಿರ್ಣಯ ಮಾಡಲಾಗಿದೆ ಎಂದು ಬರೆದುಕೊಳ್ಳುವ ಅಕ್ರಮ ನಿರ್ಣಯದ ಆಧಾರದ ಮೇಲೆ ಇದುವರೆಗೂ ಸುಮಾರು ಹತ್ತು ಸಾವಿರದಷ್ಟು ನಿವೇಶನಗಳನ್ನು ಮಂಜೂರು ಮಾಡಿ, ಹತ್ತು ಸಾವಿರಕ್ಕೂ ಹೆಚ್ಚು ಕೋಟಿ ರೂಪಾಯಿಗಳ ನಿವೇಶನಗಳ ಅಕ್ರಮವಾಗಿ ವಿತರಿಸಿ ಲೂಟಿ ಮಾಡಲಾಗಿದೆ ಎಂದು ರವಿಕುಮಾರ್ ಆರೋಪಿಸಿದರು.

20-11-2020 ಸಭೆಯ ನಿರ್ಣಯ ಫೇಕ್ ಎಂಬುದು ಸಾಬೀತು

20-11-2020 ರ ವಿಷಯ ಸಂಖ್ಯೆ 5 ರಲ್ಲಿ ಮಂಡಿಸಲಾಗುವ ಶೇ 50:50 ರ ಅನುಪಾತದಲ್ಲಿ ಪರಿಹಾರದ ರೂಪದ ನಿವೇಶನ ವಿತರಿಸಲು ನಿರ್ಣಯವೇ ಆಗಿರುವುದಿಲ್ಲ.  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣವನ್ನೇ ಉಲ್ಲೇಖಿಸಿ ಹೇಳುವುದಾದರೆ, ಅವರು ಯಾವಾಗಲೂ ಇದು ಬಿಜೆಪಿ ಸರ್ಕಾರದಲ್ಲಿ ನಿರ್ಧರಿಸಿ ಕೊಡ ಮಾಡಲಾಗಿರುವ ನಿವೇಶನಗಳು ಎಂದು ತಮಗೆ ದೊರೆತಿರುವ 14 ನಿವೇಶನಗಳ ಬಗ್ಗೆ ವ್ಯಾಖ್ಯಾನಿಸುತಾರೆ. ಆದರೆ ಅವರ ಪತ್ನಿಯವರಿಗೆ ನೀಡಲಾಗಿರುವ 14 ನಿವೇಶನಗಳ ಜ್ಞಾಪನಾಪತ್ರದ ಆದೇಶದಲ್ಲಿ ಅವರ ಪತ್ನಿಯವರ ಕೋರಿಕೆಯ ವಿಷಯವನ್ನು ದಿನಾಂಕ :  20-11-2020 ರ ಸಭೆಯಲ್ಲಿ ಅಥವಾ ಮುಂದಿನ ಯಾವುದಾದರೂ ಸಭೆಯಲ್ಲಿ ಮಂಡಿಸಿರುವ ಬಗ್ಗೆ ಉಲ್ಲೇಖವಿಲ್ಲ. ಅಂದರೆ ಸರಕಾರದ ಗಮನಕ್ಕೆ ತರುವ ಮಾತು ಹಾಗಿರಲಿ, ಪ್ರಾಧಿಕಾರದ ಸಭೆಗೂ ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿ ಅವರ ಕೋರಿಕೆಯ ವಿಷಯ ಮಂಡಿಸದೇ ಒಬ್ಬ ಭ್ರಷ್ಟ ಅಧಿಕಾರಿಯ ಮೂಲಕ ತಮ್ಮ ಪ್ರಭಾವ ಬೀರಿ 14 ನಿವೇಶನಗಳನ್ನು ನೇರವಾಗಿ ಬರೆಸಿಕೊಳ್ಳುತ್ತಾರೆ ಎಂಬುದು ಈ ಜ್ಞಾಪನಾ ಪತ್ರದ ದಾಖಲೆ ಸ್ಪಷ್ಟಪಡಿಸುತ್ತದೆ. ಹಾಗೂ 20-11-2020 ಸಭೆಯ ನಿರ್ಣಯ ಫೇಕ್ ಎಂಬುದು ಸಾಬೀತಾಗಿದೆ  ಎಂದು ರವಿಕುಮಾರ್ ತಿಳಿಸಿದರು.

ಶೇ 50:50 ರ ಅನುಪಾತದಲ್ಲಿ 2009 ರನಿ ಯಮ ಹಾಗೂ 2015 ರ  ತಿದ್ದುಪಡಿ ನಿಯಮದ ಪ್ರಕಾರ ಒಂದೇ ಒಂದು ನಿವೇಶನವನ್ನೂ ಕೊಡಲು ಬರುವುದಿಲ್ಲ. ಸಿದ್ದರಾಮಯ್ಯನವರ ಪತ್ನಿಗೆ ಸೇರಿದ 14 ನಿವೇಶನ ಸೇರಿದಂತೆ ಈವರೆಗೆ ನೀಡಲಾಗಿರುವ ಹತ್ತು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಪ್ರಾಧಿಕಾರದ ಸಭೆಗೂ ತಾರದೇ, ಸರ್ಕಾರಕ್ಕೂ ತಿಳಿಸದೇ ಲೂಟಿ ಮಾಡಲಾಗಿದೆ. ಈ ಲೂಟಿಗೆ ಮುಖ್ಯಮಂತ್ರಿಗಳು ರಕ್ಷಣೆಯಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.

ಪಾರ್ವತಿ ಅವರಿಗೆ ನೀಡಲಾದ ನಿವೇಶನಗಳ ಮಂಜೂರಾತಿ ಪತ್ರಗಳ ಕ್ರಮ ಸಂಖ್ಯೆ 1501 ರಿಂದ ಆರಂಭವಾಗುತ್ತದೆ.  ಮತ್ತೊಬ್ಬ ಮಂಜೂರಾತಿದಾರರ ಕ್ರಮಸಂಖ್ಯೆ  13255 ವರೆಗೂ ಇವೆ. ಈ ಕ್ರಮಸಂಖ್ಯೆಗಳನ್ನು ಗಮನಿಸಿದರೆ ಇದುವರೆಗೂ ಹತ್ತು ಸಾವಿರಕ್ಕೂ ಹೆಚ್ಚಿನ ನಿವೇಶನಗಳು ಲೂಟಿಯಾಗಿರುವುದನ್ನು ಫುಷ್ಟೀಕರಿಸುತ್ತಿದೆ. 2022 ರಲ್ಲಿ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ ದೂರಿನ ಪ್ರಕಾರ, ತಾಂತ್ರಿಕ ಪರಿಣಿತಿಯ ತಜ್ಞರ ಸಮಿತಿ ರಚಿಸಿ ಮುಡಾ ಅವ್ಯವಹಾರದ ವರದಿ ನೀಡುವಂತೆ ನಮ್ಮ ಸರ್ಕಾರ ಸೂಚಿಸುತ್ತದೆ.  ಆದರೆ ಅಷ್ಟರಲ್ಲಿ ಸರ್ಕಾರದ ಅವಧಿ ಪೂರ್ಣಗೊಂಡ ಕಾರಣ ಇದೇ ಸರ್ಕಾರಕ್ಕೆ ದಿನಾಂಕ : 03-11-2023 ರಲ್ಲಿ ಸಮಿತಿಯಿಂದ ವರದಿಯು ಸಲ್ಲಿಕೆಯಾಗಿರುತ್ತದೆ. ಈ ತಾಂತ್ರಿಕ ಪರಿಣಿತಿ ತಜ್ಞರ ಸಮಿತಿ ವರದಿಯು ಮುಡಾದ ಅನೇಕ ಅಕ್ರಮಗಳನ್ನು ಬಯಲಿಗೆಳೆಯುತ್ತದೆ.

ವರದಿಯಲ್ಲಿ 50:50 ರ ಅನುಪಾತದ ನಿವೇಶನ ಕೊಡಲು ನಿಯಮದಲ್ಲಿ ಅವಕಾಶವಿಲ್ಲ. ಈಗಾಗಲೇ ಕೊಟ್ಟಿರುವುದು ನಿಯಮಬಾಹಿರ ಎಂದು ಹೇಳುತ್ತದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ 27-10-2023  ರಂದು 50:50 ರ ಅನುಪಾತದ ನಿವೇಶನ ವಿತರಿಸುವುದುನಿ ಯಮಬಾಹಿರ ಎಂದು ಸ್ಪಷ್ಟವಾಗಿ ಹೇಳುತ್ತದೆ.  ಮತ್ತು ಮುಡಾದ ನಿರ್ಣಯವನ್ನು ರದ್ದು ಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ವಿತರಿಸಿರುವ ಎಲ್ಲಾ ಮಂಜೂರಾತಿ ಪತ್ರದಲ್ಲಿ ಶೇ 50:50 ಎಂದು ನಮೂದಿಸಿದರೆ, ಕ್ರಯಪತ್ರದಲ್ಲಿ 1991 ರನಿಯಮವನ್ನು ಉಲ್ಲೇಖಿಸಲಾಗುತ್ತದೆ. 1991 ರ ನಿಯಮದ ಪ್ರಕಾರ ಈವರೆಗೂ ವಿತರಣೆಯಾಗಿರುವ ನಿವೇಶನಗಳಲ್ಲಿ ಸ್ಪಷ್ಟವಾಗಿ ಆ ನಿಯಮಗಳನ್ನು ಸಹ ಉಲ್ಲಂಘಿಸಿ ಸ್ವೇಚ್ಛಾಚಾರವಾಗಿ ನಿವೇಶನ ವಿತರಿಸಿ ಅಕ್ರಮ ಮೆರೆದಿರುವುದರ ಜೊತೆಗೆ ಮೈಸೂರಿನ ಲಕ್ಷಾಂತರ ಸೂರು ರಹಿತ ಜನರಿಗೆ ದಕ್ಕಬೇಕಾದ ನಿವೇಶನಗಳನ್ನು ಲೂಟಿ ಹೊಡೆಯಲಾಗಿದೆ ಎಂದು ರವಿಕುಮಾರ್ ದೂರಿದರು.

Key words: Site, without, discussion, MUDA meeting, MLC, Ravikumar

Tags :

.