For the best experience, open
https://m.justkannada.in
on your mobile browser.

ವಿಶ್ವದಲ್ಲೇ ಮೊದಲನೇಯದು ; ವಾಕ್ ಮತ್ತು ಶ್ರವಣ ಮ್ಯೂಸಿಯಂ @ ಮೈಸೂರು

05:22 PM May 06, 2024 IST | mahesh
ವಿಶ್ವದಲ್ಲೇ ಮೊದಲನೇಯದು   ವಾಕ್ ಮತ್ತು ಶ್ರವಣ ಮ್ಯೂಸಿಯಂ   ಮೈಸೂರು

ಮೈಸೂರು, ಮೇ. 06, 2024 : (www.justkannada.in news ) ವಿಶ್ವದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಳು ಅಂತಸ್ತಿನ  “ ವಾಕ್ ಮತ್ತು ಶ್ರವಣ ಮ್ಯೂಸಿಯಂ “ ಮೈಸೂರಿನಲ್ಲಿ ನಿರ್ಮಾಣಗೊಂಡಿದ್ದು, ಅಂತಿಮ ಸ್ಪರ್ಶದ ಆರಂಭಕ್ಕೆ  ದಿನಗಣನೆ ಶುರುವಾಗಿದೆ.

ಮಾನವ ಮುಖದ ಆಕಾರದಲ್ಲಿರುವ ಈ ಕಟ್ಟಡ, ಏಳು ಅಂತಸ್ತಿನದ್ದಾಗಿದ್ದು,  ಮಾತು ಮತ್ತು ಕೇಳುವಿಕೆಗೆ ಸಂಬಂಧಿಸಿದ ಅನೇಕ ಉಪಯುಕ್ತ ಮಾಹಿತಿ ಒದಗಿಸಲಿದೆ.

ಈ ವಿಶೇಷ ಮ್ಯೂಸಿಯಂ ನಿರ್ಮಾಣ  ಸಂಬಂಧ “ ಜಸ್ಟ್‌ ಕನ್ನಡ “ ಜತೆ ಮಾತನಾಡಿದ ಐಷ್‌ ನಿರ್ದೇಶಕಿ ಡಾ.ಪುಷ್ಪಾವತಿ ಅವರು ಹೇಳಿದಿಷ್ಟು..

ಇದು ವಿಶ್ವದ ಮೊದಲ ವಾಕ್ ಮತ್ತು ಶ್ರವಣ ಸಂಗ್ರಹಾಲಯ. ಕೆಂಟ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಶ್ರವಣ ಸಾಧನ ವಸ್ತುಸಂಗ್ರಹಾಲಯವಿದೆ ಮತ್ತು ಸ್ಪ್ರಿಂಗ್‌ಫೀಲ್ಡ್‌ನಲ್ಲಿ ಹಿಯರಿಂಗ್ ಮ್ಯೂಸಿಯಂ ಇತಿಹಾಸವಿದೆ. ಆದರೆ, ಇದೇ ಮೊದಲ ಬಾರಿಗೆ ಈ ಎರಡರ ಸಮ್ಮಿಲನವಾಗಿ  ಮೈಸೂರಿನಲ್ಲಿ ಮ್ಯೂಸಿಯಂ ನಿರ್ಮಾಣಗೊಂಡಿದ್ದು, ಈ ವಸ್ತುಸಂಗ್ರಹಾಲಯವು ಶ್ರವಣ ಮತ್ತು ವಾಕ್ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ ಎಂದರು.

ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ (  ಆಲ್-ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಇನ್ಸ್ಟಿಟ್ಯೂಟ್ – AIISH ) ಕೇಂದ್ರ ಸರ್ಕಾರದ ವಾಕ್ ಮತ್ತು ಶ್ರವಣ ಕ್ಷೇತ್ರದ ಪ್ರಮುಖ ಸಂಸ್ಥೆ.

"ಅಂಗವಿಕಲರ ಸ್ನೇಹಿ" "ತಡೆ-ಮುಕ್ತ" ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಈ ಸಲುವಾಗಿಯೇ ಐಷ್‌ ಆವರಣದ ಜ್ಞಾನ ಉದ್ಯಾನದ ಪಕ್ಕದಲ್ಲಿ ಈ ಕಟ್ಟಡ ತಲೆ ಎತ್ತಿದೆ.

ಸಾರ್ವಜನಿಕರೇ ಖುದ್ದು 'ಸ್ಪರ್ಶಿಸಿ, ಅನುಭವಿಸಿ ಮತ್ತು ಕಲಿಯಲಿ' ಎಂಬ ಪರಿಕಲ್ಪನೆ ಮೇರೆಗೆ ಇದರ ನಿರ್ಮಾಣವಾಗುತ್ತಿದೆ. ವಸ್ತುಸಂಗ್ರಹಾಲಯವು ಮೆದುಳು, ಕಿವಿ, ಮೂಗು, ನಾಲಿಗೆ ಮತ್ತಿತರ ಅಂಗಗಳ ಕಾರ್ಯನಿರ್ವಹಣೆ ಅರ್ಥಮಾಡಿಕೊಳ್ಳುವ ನೂತನ ಮಾರ್ಗಗಳನ್ನು ಒಳಗೊಂಡಿರುತ್ತದೆ,

ಈ ಮ್ಯೂಸಿಯಂಗೆ ಭೇಟಿ ನೀಡಿದ ನಂತರ ನಾವು ಹೇಗೆ ಮಾತನಾಡುತ್ತೇವೆ ಮತ್ತು ಕೇಳುತ್ತೇವೆ ಎಂಬುದನ್ನು ಸಂದರ್ಶಕರೇ ಖುದ್ದು  ಅನುಭವಿಸಬಹುದಾಗಿದೆ ಎಂದು ಡಾ.ಪುಷ್ಪಾವತಿ ವಿವರಿಸಿದರು.

ವಸ್ತುಸಂಗ್ರಹಾಲಯವು , ಮೂಲಭೂತ ಮತ್ತು ಸುಧಾರಿತ ವಿಭಾಗಗಳು ಎಂಬ ಪರಿಕಲ್ಪನೆಯಲ್ಲಿ ಸಾರ್ವಜನಿಕರಿಗೆ ಮತ್ತು ವೃತ್ತಿಪರರನ್ನು ಗುರಿಯಾಗಿಸಿಕೊಂಡು ನಿರ್ಮಿಸಲಾಗಿದೆ.

ವಸ್ತುಸಂಗ್ರಹಾಲಯದ ಈ  ನೆಲಮಾಳಿಗೆಯಲ್ಲಿ, ವಾಕ್‌ _ಶ್ರವಣ ಸಂಸ್ಥೆ ಹೇಗೆ ಪ್ರಾರಂಭಗೊಂಡಿತು. ಅದರ ಆರಂಭಕ್ಕೆ ಮೈಸೂರು ಮಹಾರಾಜರ ಕೊಡುಗೆ ಏನು ಎಂಬುದನ್ನು ತಿಳಿಸಲಾಗುತ್ತದೆ. ಇತಿಹಾಸ ಬಲ್ಲವರೇ ಇತಿಹಾಸ ಸೃಷ್ಠಿಸಲು ಸಾಧ್ಯ ಎಂಬ ನುಡಿಯಂತೆ, ಸಂಸ್ಥೆಯ ಆರಂಭಿಕ ದಿನಗಳನ್ನು ಸಮಗ್ರವಾಗಿ ಇಲ್ಲಿ ವಿವರಿಸಲಾಗುತ್ತದೆ ಎಂದರು.

ಒಂದೊಂದು ಅಂತಸ್ತಿನಲ್ಲೂ ಒಂದೊಂದು ವಿಧದ ಮಾದರಿ ಹಾಗೂ ವಿವರಣೆಗಳು ಇರಲಿವೆ. ಮಾನವನ  ಉಸಿರಾಟದ ಕಾರ್ಯವಿಧಾನ ವಿವರಿಸುವ ಮಾದರಿಗಳನ್ನು ಒಂದು ಅಂತಸ್ತಿನಲ್ಲಿ ಪ್ರದರ್ಶಿಸಲಾಗುತ್ತದೆ.

ಧ್ವನಿಪೆಟ್ಟಿಗೆಯ ಕಾರ್ಯವಿಧಾನ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಅಸ್ವಸ್ಥತೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಮತ್ತೊಂದು ಅಂತಸ್ತಿನಲ್ಲಿ ನೀಡಲಾಗುತ್ತದೆ. ಮಾತು ಮತ್ತು ಶ್ರವಣ ಹಾಗೂ ಶಾರೀರಿಕ ಅಸ್ವಸ್ಥತೆಗಳ ಬಗ್ಗೆ ಮಾಹಿತಿಗೆ ಒಂದು ಅಂತಸ್ತು ಮೀಸಲಿರುತ್ತದೆ.

ಮೆದುಳಿನ ಅಸ್ವಸ್ಥತೆಗಳನ್ನು ಮತ್ತೊಂದು ಮಹಡಿಯಲ್ಲಿ ವಿವರಿಸಲಾಗುವುದು. ಪ್ರವಾಸ ಮಾಡುವಾಗ ಸಂದರ್ಶಕರು ಮೆದುಳಿನ ಎಡ ಮತ್ತು ಬಲ ಗೋಳಾರ್ಧದ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿಗೆ ಪ್ರತ್ಯೇಕವಾಗಿ ಮತ್ತೊಂದು ಅಂತಸ್ತಿನಲ್ಲಿ ಮಾಹಿತಿ ನೀಡಲಾಗುತ್ತದೆ.

ಈ ವಸ್ತುಸಂಗ್ರಹಾಲಯದ ಮೂಲ ಪರಿಕಲ್ಪನೆ ಸಂಸ್ಥೆ ಹಿಂದಿನ ನಿರ್ದೇಶಕಿ ದಿವಂಗತ ಎಸ್.ಆರ್. ಸಾವಿತ್ರಿ ಅವರದ್ದು ಎಂದು ಸ್ಮರಿಸಿಕೊಂಡ ಡಾ.ಪುಷ್ಪಾವತಿ,  ಸುರುಳಿಯಾಕಾರದ ಮೆಟ್ಟಿಲು ಮೂಲಕ  ಮಹಡಿ ಮೇಲೆ ಸಾಗುವಂತೆ ಈ ಮ್ಯೂಸಿಯಂನ ವಿನ್ಯಾಸ ಮಾಡಲಾಗಿದೆ.  ಜತೆಗೆ ಮಾನವ ಮುಖದ ಆಕಾರದ ರಚನೆಯಲ್ಲಿ ಎಲ್ಲಾ ಅಂತಸ್ತುಗಳಿಗೂ ಲಿಫ್ಟ್‌ ನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

AIISH ನ ಎಲೆಕ್ಟ್ರಾನಿಕ್ಸ್ ವಿಭಾಗದ ಅಜೀಶ್ ಅಬ್ರಹಾಂ ಅವರು ಈ ಯೋಜನೆಯ ಸಂಯೋಜಕರಾಗಿದ್ದು, ಕಟ್ಟಡ ನಿರ್ಮಾಣ ಹಾಗೂ ಇಂಟೀರಿಯರ್ಸ್‌ ತಂಡದ ಜತೆ ನಿರಂತರ ಸಂಪರ್ಕದಲ್ಲಿದ್ದು ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ನೀತಿ ಸಂಹಿತೆ ಬಳಿಕ ಟೆಂಡರ್‌ :

ವಾಕ್‌ - ಶ್ರವಣ ಮ್ಯೂಸಿಯಂನ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಿವಿಧ ಅಂತಸ್ತುಗಳಲ್ಲಿ ಮಾಡೆಲ್‌ ಹಾಗೂ ಮಲ್ಟಿ ಮೀಡಿಯಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅನುಭವಿಗಳಿಂದ ಟೆಂಡರ್‌ ಆಹ್ವಾನಿಸಬೇಕಾಗಿದೆ. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಟೆಂಡರ್‌ ಪ್ರಕ್ರಿಯೆಗೆ ಕೊಂಚ ಹಿನ್ನೆಡೆಯಾಗಿದೆ. ನೀತಿ ಸಂಹಿತಿ ಮುಗಿದ ಕೂಡಲೇ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಡಾ.ಪುಷ್ಪಾವತಿ ಸ್ಪಷ್ಟಪಡಿಸಿದರು.

key words :  Speech and Hearing Museum , AIISH, Mysore

SUMMARY : 

Mysuru: The seven-Storey "Speech and Hearing Museum", the first in the world, has come up in Mysuru and the countdown for the start of the final touches has begun.

The building, which is shaped like a human face, is seven-storey edifice and will provide many useful information related to speech and hearing.

Speaking to Just Kannada, Aiish Director Dr. Pushpavathi said, The Mysore-based All-India Institute of Speech and Hearing Institute (AIISH), a premier institute in the field of speech and hearing under the government of India, has proposed setting up a “disabled-friendly” “barrier-free” museum on its premises. The building will come up next to the knowledge park.

Tags :

.