ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ‘Spoken English’
ಬೆಂಗಳೂರು,ಮೇ,29,2024 (www.justkannada.in): ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್(Spoken English) ತರಗತಿಗಳನ್ನ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ಪ್ರತಿ ಶನಿವಾರದಂದು ವಿದ್ಯಾರ್ಥಿಗಳಿಗೆ 40 ನಿಮಿಷದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ಮಾಡಿದೆ. ಸಂಭಾಷಣೆ, ನಾಟಕ, ಪಾತ್ರಾಭಿನಯ, ಕಥೆ ಹೇಳುವುದು, ಪರಿಸ್ಥಿತಿ ವಿವರಣೆ, ಅನುಭವಗಳ ಹಂಚಿಕೆ ಈ ಎಲ್ಲಾ ಚಟುವಟಿಕೆಗಳು ಸ್ಪೋಕನ್ ಇಂಗ್ಲೀಷ್ ತರಗತಿಗಳಲ್ಲಿ ಇರಲಿವೆ. ಸ್ಪೋಕನ್ ಇಂಗ್ಲೀಷ್ ಪ್ರಸ್ತಾವನೆಯನ್ನ ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಅಳವಡಿಸಲಾಗಿದೆ.
ಇಂಗ್ಲೀಷ್ ಕಲಿಕೆಯೂ ಗ್ರಾಮೀಣ ಭಾಗದ ಮಕ್ಕಳಲ್ಲಿ ಸವಾಲಿನ ಕೆಲಸವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ(JEE), ಎನ್ ಇಇಟಿ(NEET), ಸಾಮಾನ್ಯ ಪ್ರವೇಶ ಪರೀಕ್ಷೆ(CET) ಎದುರಿಸಲು, ವೃತ್ತಿಪರಕೋರ್ಸ್ ಗಳಾದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಗೆ ಪ್ರವೇಶ ಪಡೆಯಲು ಇಂಗ್ಲೀಷ್ ಭಾಷೆ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಶಾಲೆಗಳ ಹಂತದಲ್ಲೇ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನ ನೀಡಿದರೇ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಹಕಾರಿಯಾಗುತ್ತದೆ.
ಸ್ಪೋಕನ್ ಇಂಗ್ಲೀಷ್ ಕೈಪಿಡಿಯನ್ನ ಪದವೀಧರ ಶಿಕ್ಷಕರು, ಅಂಗ್ಲಭಾಷೆಯ ಶಿಕ್ಷಕರ ತಂಡ ತಯಾರಿಸಲಿದ್ದು ಇದು ವಿದ್ಯಾರ್ಥಿಗಳು ನಿರರ್ಗಳವಾಗಿ ಅಂಗ್ಲಭಾಷೆಯನ್ನ ಮಾತನಾಡಲು ಅನುಕೂಲವಾಗಲಿದೆ. ಇನ್ನು ಪ್ರತಿ ಶನಿವಾರ 3ನೇ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಬರೀ ಇಂಗ್ಲೀಷನಲ್ಲೇ ಮಾತನಾಡಬೇಕೆಂಬುದನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
Key words: Spoken English, government, aided, schools