For the best experience, open
https://m.justkannada.in
on your mobile browser.

ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ – ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ.

05:23 PM Dec 26, 2023 IST | prashanth
ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆ ಸಹಕಾರಿ – ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ

ಶಿವಮೊಗ್ಗ, ಡಿಸೆಂಬರ್,26,2023(www.justkannada.in): ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 3 ಸಾವಿರ ಕೆ.ಪಿ.ಎಸ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ  ಎಸ್ ಮಧು ಬಂಗಾರಪ್ಪ  ಅವರು ಹೇಳಿದರು.

ಇಂದು ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಜಿಲ್ಲೆಯ ಸೊರಬದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ ಎಂದರು.

ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡುವುದರ ಜೊತೆಗೆ ಸರ್ಕಾರ ಹಾಗೂ ಸ್ಥಳೀಯರ ಪ್ರೋತ್ಸಾಹವೂ ಅತ್ಯಗತ್ಯ ಎಂದು ತಿಳಿಸಿದರು.

ಹಿಂದೆ ಇದ್ದ ಹಳೆಯ ಜನಪದ ಕ್ರೀಡೆಗಳು ಕಣ್ಮರೆಯಾಗಿವೆ. ಮಕ್ಕಳು ದೇಶದ ಸಾಧಕರ ಸಾಲಿನಲ್ಲಿ ನಿಲ್ಲುವಂತಿಲ್ಲ ಸಕಾಲಿಕ ಪ್ರೋತ್ಸಾಹ ಅಗತ್ಯ. ಸ್ಥಳೀಯವಾಗಿಯೂ ಜಗತ್ತಿಗೆ ಪ್ರೇರಣೆಯಾಗಬಹುದಾದ ಪ್ರತಿಭೆಗಳು ಇವೆ ಎಂದರು.

ಶಾಲೆಗಳಲ್ಲಿ ಪಠ್ಯ ವಿಷಯಗಳಲ್ಲದೆ  ಕಲೆ, ಸಾಹಿತ್ಯ, ಸಂಗೀತ, ನೃತ್ಯ ಸೇರಿದಂತೆ ಎಲ್ಲಾ ಪ್ರಕಾರದ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಹಂತದಿಂದ ದ್ವಿತೀಯ ಪಿ.ಯು.ಸಿ ವರೆಗಿನ ಶಿಕ್ಷಣ ಪಡೆಯುವ ಮಕ್ಕಳಿಗೆ ಸಮಾಜದ ಎಲ್ಲಾ ಕ್ಷೇತ್ರಗಳ ಪರಿಚಯವಾಗಲಿದೆ ಮಾತ್ರವಲ್ಲ ಅವರ ಸರ್ವಾಂಗೀಣ ವಿಕಾಸಕ್ಕೆ ಅವಕಾಶವಾಗಲಿದೆ ಎಂದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ 5500 ದೈಹಿಕ ಶಿಕ್ಷಕರು ಹಾಗೂ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆದು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ರಾಜ್ಯದ 1.80 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದು ನುಡಿದರು.

ಮುಂದಿನ ವರ್ಷದ ಡಿಸೆಂಬರ್ 31ರೊಳಗಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳು ನೆಲದ ಮೇಲೆ ಕೂರದಂತೆ ಅಗತ್ಯ ಬೆಂಚು, ಕುರ್ಚಿ, ಟೇಬಲ್ ಗಳನ್ನು ಒದಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಡಯಟ್ ಪ್ರಾಚಾರ್ಯ ಬಸವರಾಜಪ್ಪ ಬಿ ಆರ್, ತಹಶೀಲ್ದಾರ್ , ಹುಸೈನ್‌ ಸರಖಾವಸು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರದೀಪ್ ಕುಮಾರ್ ಎನ್ ಆರ್ ಮತ್ತಿತರರು ಉಪಸ್ಥಿತರಿದ್ದರು.

Key words: Sports -support - physical - mental -development - children –Minister -Madhu Bangarappa

Tags :

.