ಎರಡು ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನಾಮ ನಿರ್ದೇಶನ
ಬೆಂಗಳೂರು,ಸೆಪ್ಟಂಬರ್,12,2024 (www.justkannada.in): ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನ ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ವಿಶ್ವ ವಿದ್ಯಾನಿಲಯಕ್ಕೆ ಸಾಮಾನ್ಯ ಪ್ರವರ್ಗಕ್ಕೆ ಸೇರಿದ ಶಿಲ್ಪ ವಿ.ಎನ್ (M.Tech) ಅವರನ್ನು ಹಾಗೂ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಡಾ.ಬಸವರಾಜ ಗೊರವರ( MSW,KSET, Ph.D) ಅವರನ್ನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಉನ್ನತ ಶಿಕ್ಷಣಇಲಾಖೆಯ(ವಿಶ್ವ ವಿದ್ಯಾನಿಲಯ-2) ಅಧೀನ ಕಾರ್ಯದರ್ಶಿ ಕೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ರ ಪ್ರಕರಣ 28 (1) (ಜಿ) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಅದೇ ನಿಯಮದ ಪ್ರಕರಣ 38(1), 39(1) ರ ಉಪಬಂಧಕ್ಕೊಳಪಟ್ಟು, ಅಧಿಸೂಚನೆ ಸಂಖ್ಯೆ: ಇಡಿ/425/ಯುಆರ್ ಸಿ/2024 ದಿನಾಂಕ:27/08/2024ರಲ್ಲಿ ಕೆಳಕಂಡ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ 03 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಾಮನಿರ್ದೇಶನಗಳನ್ನು ಮಾಡಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಡಲಾಗಿದ್ದ ಡಾ: ಬೀರಪ್ಪ ಹೆಚ್. ಬಿನ್ ಹುಚ್ಚೇಗೌಡ, ಇವರ ನಾಮನಿರ್ದೇಶನವನ್ನು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಾಡಲಾಗಿದ್ದ ದೇವೇಂದ್ರಪ್ಪ ದ್ಯಾಮಪ್ಪಾ ಮಾಳಗಿ, ಹುಬ್ಬಳ್ಳಿ, ಇವರ ನಾಮನಿರ್ದೇಶನವನ್ನು ಸರ್ಕಾರ ಹಿಂಪಡೆದಿದ್ದು ಈ ಹಿನ್ನೆಲೆಯಲ್ಲಿ ಇದೀಗ ಹೊಸ ಸದಸ್ಯರನ್ನ ನಾಮನಿರ್ದೇಶನ ಮಾಡಲಾಗಿದೆ.
Key words: Syndicate members, BangaloreUniversity, Karnataka University