HomeBreaking NewsLatest NewsPoliticsSportsCrimeCinema

ಒಬ್ಬ ಕನಸುಗಾರನ ಬೆನ್ನತ್ತಿ : ರಾಮೋಜಿರಾವ್‌ ಅವರ ಬಗ್ಗೆ  ನೀವು ತಿಳಿದುಕೊಳ್ಳಲೇ ಬೇಕಾದ ಕೆಲ ಸಂಗತಿಗಳು..

06:53 PM Jun 08, 2024 IST | mahesh

 

ಮೈಸೂರು, ಜೂ.08,2024: (www.justkannada.in news)  ರಾಮೋಜಿ ರಾವ್ ಇನ್ನಿಲ್ಲ. ಒಬ್ಬ ದೊಡ್ಡ ಕನಸುಗಾರ ನಮ್ಮಿಂದ ಮರೆಯಾಗಿದ್ದಾರೆ. ಉಪ್ಪಿನಕಾಯಿಯಿಂದ ಆರಂಭಿಸಿ ಜಗತ್ತು ನಿಬ್ಬೆರಗಾಗಿ ನೋಡಿದ ರಾಮೋಜಿ ಫಿಲಂ ಸಿಟಿ ರೂಪಿಸಿದ ಹೆಮ್ಮೆ ಇವರದ್ದು. ಸಂಪಾದಕೀಯ ಸ್ವಾತಂತ್ರ್ಯವೇ ಮರೀಚಿಕೆಯಾಗಿರುವ ಈ ದಿನಗಳಲ್ಲಿ ಅವರು ತಮ್ಮ ಪತ್ರಿಕೆ, ಚಾನಲ್ ಗಳಿಗೆ ನೀಡಿದ್ದ ಸಂಪಾದಕೀಯ ಸ್ವಾತಂತ್ರ್ಯ ಸ್ಮರಣೀಯವಾದದ್ದು. ಅವರು ಇಲ್ಲವಾದ ಈ ದಿನ  ಹಿರಿಯ ಪತ್ರಕರ್ತ ಜಿ.ಎನ್.ಮೋಹನ್‌ ಅವರು,  ಈ ಹಿಂದೆ 'ಈಟಿವಿ' ಚಾನಲ್ ಗೆ 10 ವರ್ಷ ತುಂಬಿದ ಸಂದರ್ಭದಲ್ಲಿ ಬರೆದ ಲೇಖನ ಈಗ ಮತ್ತೆ ನಿಮ್ಮ ಮುಂದೆ…

‘ಸಾರ್ ಯಾಕೆ ನೀವು ಆಟೋಬಯಾಗ್ರಫಿ ಬರೆಯಬಾರದು?’ ಅನ್ನುವ ಪ್ರಶ್ನೆಯನ್ನು ನಾನು ಮುಂದಿಟ್ಟದ್ದು ರಾಮೋಜಿ ರಾವ್ ಅವರಿಗೆ. ಹಾಗೆ ಕೇಳಲು ನನಗೆ ಸಾಕಷ್ಟು ಕಾರಣಗಳಿತ್ತು. ರಾಮೋಜಿರಾಯರ ಜತೆ ಮಾತಿಗೆ ಕೂತಾಗಲೆಲ್ಲ ಅವರ ನೆನಪುಗಳು ಪ್ರವಾಹದಂತೆ ನುಗ್ಗಿ ಬರುತ್ತಿದ್ದವು. ಅಲ್ಲಿ ಉಪ್ಪಿನಕಾಯಿಯೂ ಇತ್ತು. ಪತ್ರಿಕೋದ್ಯಮವೂ ಇತ್ತು. ಚಿಟ್ ಫಂಡ್ ಇತ್ತು, ಹೋಟೆಲ್ ಗಳಿದ್ದವು, ವಿಶಾಖಪಟ್ಟಣ, ಕೃಷ್ಣಾ, ತೆಲಂಗಾಣಗಳಿದ್ದವು. ಎನ್ ಟಿ ರಾಮರಾವ್, ಚಂದ್ರಬಾಬು ನಾಯ್ಡು, ವೈಎಸ್ ರಾಜಶೇಖರ ರೆಡ್ಡಿಯವರೂ ಇದ್ದರು.

ಅವರ ಜತೆಗೆ ಮಾತಿಗೆ ಕುಳಿತಾಗೆಲ್ಲ ನನಗೆ ಒಂದು ಹೊಸ ಜಗತ್ತು ಬಿಚ್ಚಿಕೊಳ್ಳುತ್ತಾ ಹೋಗುತ್ತಿತ್ತು. ನಾನು ಆ ದಿನ ಚರ್ಚಿಸಬೇಕಾಗಿದ್ದದ್ದನ್ನೆಲ್ಲ ಪಟ್ಟಿ ಮಾಡಿ ಅವರ ಚೇಂಬರ್ ಹೊಕ್ಕರೆ ಹೊರಬರುತ್ತಿದ್ದುದು ಒಂದು ದೊಡ್ಡ ಅನುಭವದೊಂದಿಗೆ. ಎಷ್ಟೋ ದಿನಗಳಿಂದ ಅವರು ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದಾರೇನೋ ಎನ್ನುವ ಅನುಭವ ಆಗ ಹೊರಗೆ ಇಣುಕುತ್ತಿತ್ತು. ಯಾರಿಗೂ ಗೊತ್ತೇ ಇಲ್ಲ ಎನ್ನುವಂತಹ ವಿಷಯಗಳೂ ಆಚೆಗೆ ಬರುತ್ತಿತ್ತು. ಎನ್ ಟಿ ರಾಮರಾವ್ ಹಾಗೂ ಚಂದ್ರಬಾಬು ನಾಯ್ಡು ನಡುವೆ ಯಾಕೆ ನನ್ನ ಆಯ್ಕೆ ಚಂದ್ರಬಾಬು ನಾಯ್ಡು ಅನ್ನುವುದನ್ನು ವಿವರಿಸುತ್ತಿದ್ದರು. ‘ಅನ್ನದಾತ’ ಎನ್ನುವ ಕಾನ್ಸೆಪ್ಟ್ ಹುಟ್ಟಲು ಏನು ಕಾರಣ ಎನ್ನುವುದನ್ನು ಬಿಡಿಸಿಡುತ್ತಿದ್ದರು.

ಹಾಗೆ ಮಾತಾನಾಡುವಾಗಲೇ ಒಂದು ದಿನ ಎನ್ ಟಿ ರಾಮರಾವ್ ಸರಕಾರ ಹೇಗೆ ತನ್ನನ್ನು ಹುಡುಕುತ್ತಾ ಬಂತು ಎನ್ನುವುದನ್ನು ಬಣ್ಣಿಸಿದರು. ಅದು ಒಂದು ಪತ್ತೇದಾರಿ ಕಾದಂಬರಿಯೇನೋ ಎನ್ನುವಂತೆ ನಾನು ಮೈಯೆಲ್ಲಾ ಕಿವಿಯಾಗಿ ಕುಳಿತುಬಿಟ್ಟಿದ್ದೆ. ಪೊಲೀಸ್ ಪಡೆ ಬೆನ್ನತ್ತಿದ್ದು, ತಾವು ದಿನಗಟ್ಟಲೆ ಆಫೀಸ್ ನಲ್ಲಿಯೇ ಕೂಡುವಂತಾಗಿದ್ದು ಹೀಗೆ ಅವರ ಸಾಹಸ ಗಾಥೆ ಕೇಳುವಾಗ ನನ್ನ ಮೈ ಮೇಲಿನ ರೋಮಗಳೂ ಎದ್ದು ಕುಳಿತಿದ್ದವು.

ಹಾಗೆ ಹೇಳುವಾಗಲೇ ನಾನು ಕೇಳಿದ್ದು- ಯಾಕೆ ಆಟೋಬಯಾಗ್ರಫಿ ಬರೆಯಬಾರದು ಅಂತ.

ತಕ್ಷಣ ಅವರು ಒಂದು ನಿಮಿಷ ಬಂದೆ ಅಂದವರೇ ತಮ್ಮ ಖಾಸಗಿ ಕೋಣೆ ಹೊಕ್ಕರು. ವಾಪಸ್ ಬಂದಾಗ ಅವರ ಕೈಯಲ್ಲಿ ಒಂದು ಪುಸ್ತಕ ಇತ್ತು. ಅದೂ ಕನ್ನಡ ಪುಸ್ತಕ. ಪುಟ ತಿರುಗಿಸುತ್ತಾ ಹೋದೆ. ಅದು ಬದುಕಿನಲ್ಲಿ ಒಂದು ಮೆಟ್ಟಿಲು ಹತ್ತಲೂ ಕಷ್ಟಪಟ್ಟವರ ಕಥೆಗಳು. ಬದುಕಿನ ನಕಾಶೆಯಲ್ಲಿ ಎಂದೂ ದಾಖಲಾಗದೆ ಹಾಗಾಗೇ ಮರೆಯಾಗಿ ಹೋಗಬಹುದಾದವರ ಚರಿತ್ರೆ ಅಲ್ಲಿ ಬಿಡಿಸಿಟ್ಟುಕೊಂಡಿತ್ತು.

‘ಸಮಾಜಕ್ಕೆ ಅಗತ್ಯವಿರುವುದು ಇಂತಹವರ ಆತ್ಮಚರಿತ್ರೆ. ಒಂದು ಗೌರವಯುತ ಬದುಕಿಗಾಗಿ ಹೋರಾಡಿದವರ ಬದುಕು ದಾಖಲಾಗದೇ ಉಳಿಯಬಾರದು ಅಲ್ವಾ’ ಎಂದರು. ಈ ಪುಸ್ತಕ ನಿಮಗಾಗಿ ಎಂದರು. ನನಗೂ ಕುತೂಹಲವಿತ್ತು. ಪುಟಗಳನ್ನು ತಿರುಗಿಸುತ್ತಾ ಹೋದೆ ಅದು ತೆಲುಗಿನಿಂದ ಅನುವಾದವಾಗಿದ್ದ ಪುಸ್ತಕ. ‘ಈ ನಾಡು’ ಪತ್ರಿಕೆಯಲ್ಲಿ ರಾಮೋಜಿರಾಯರ ಒತ್ತಾಸೆಯಿಂದ ಮೂಡಿ ಬಂದಿದ್ದ ಆತ್ಮಚರಿತ್ರೆ ಇಲ್ಲದವರ ಆತ್ಮಚರಿತ್ರೆ ಅದು. ‘ಎಲ್ಲಿದ್ದರೋ ಅವರು, ಎಂತಿದ್ದರೋ ಅವರು, ಎಚ್ಚೆತ್ತ ಸಿಂಹಗಳು ನನ್ನ ಜನರು, ಎದ್ದ ಬಿರುಗಾಳಿಗಳು ನನ್ನ ಜನರು, ಎಷ್ಟು ಲೋಕದ ಕನಸು ಕಾಣುತ್ತಿದ್ದರೋ ಅವರು ಎದ್ದ ಬಿರುಗಾಳಿಗಳು ನನ್ನ ಜನರು.’ ಎನ್ನುವ ಕವಿತೆಯ ಸಾಲುಗಳು ಇಲ್ಲಿ ನಿಜವಾಗಿ ಹೋಗಿತ್ತು. ಒಪ್ಪತ್ತಿನೂಟಕ್ಕೂ ಕಷ್ಟಪಡುವವರ ಕಥೆಗಳು ಹರಿದು ಬಂದಿತ್ತು. ಅದು ರಾಮೋಜಿರಾವ್.

ರಾಮೋಜಿರಾವ್ ಅವರಿಗಿದ್ದಿದ್ದು ಕನಸುಗಳು ಮಾತ್ರ. ಉಪ್ಪಿನಕಾಯಿಯನ್ನು ಒಂದು ಜಗತ್ತಿನ ಬ್ರಾಂಡ್ ಮಾಡಲು, ಒಂದು ಪೇಪರ್ ತೆಲುಗಿನ ಆತ್ಮಸಾಕ್ಷಿ ಎನ್ನುವಂತೆ ಬೆಳೆಸಲು, ಬಾಲಿವುಡ್ ಸಿನಿಮಾಗಳ ಮಧ್ಯೆ ತೆಲುಗು ಸಿನಿಮಾ ಎದ್ದು ನಿಂತು ಸಕ್ಸಸ್ ಆಗಲು, ಒಂದು ಚಾನೆಲ್ 12 ಚಾನೆಲ್ ಗಳ ಗುಚ್ಛವಾಗಿ ಅರಳಲು, ಒಂದು ಸರಕಾರ ಅಮೆರಿಕ ವೈಟ್ ಹೌಸ್ ವರೆಗೆ ದಾರಿ ಮಾಡಿಕೊಳ್ಳಲು… ರಾಮೋಜಿ ರಾಯರಿಗೆ ಬೇಕಾಗಿದ್ದದ್ದು ಕನಸುಗಳು ಮಾತ್ರ.

ರಾಮೋಜಿ ಫಿಲಂ ಸಿಟಿಯಲ್ಲಿ ಹೆಜ್ಜೆ ಹಾಕುವಾಗಲೆಲ್ಲಾ ನಾವು ಗೆಳೆಯರು ಜೋಕ್ ಮಾಡುತ್ತಿದ್ದೆವು ಈ ಜಗತ್ತನ್ನು ಆ ದೇವರು ಸೃಷ್ಟಿಸಿದ. ಆದರೆ ರಾಮೋಜಿ ಫಿಲಂ ಸಿಟಿಯನ್ನು ರಾಮೋಜಿರಾಯರೇ ಸೃಷ್ಟಿಸಿದರು ಅಂತ. God created this Universe. But Universe waited for Ramojirao to create a Film city. ದೇವರಿಗೆ ಸಾಧ್ಯವಾದದ್ದೆಲ್ಲಾ ರಾಮೋಜಿರಾಯರಿಗೂ ಸಾಧ್ಯ ಎನ್ನುವುದು ಪ್ರತೀದಿನ ಆ ಲೋಕದಲ್ಲಿ ಓಡಾಡುತ್ತಿದ್ದ ನಮಗೆ ನಿಚ್ಚಳವಾಗಿ ಹೋಗಿತ್ತು.

ರಾಮೋಜಿರಾಯರ ಕನಸಿಗೆ ಮೊದಲ ಬೀಜ ಬಿದ್ದದ್ದು ಒಂದು ಪುಟ್ಟ ಜಾಹೀರಾತು ಕಂಪನಿಯಲ್ಲಿ. ಉಪ್ಪಿನಕಾಯಿಯ ಬೆನ್ನತ್ತಿದ್ದ ರಾಮೋಜಿರಾಯರು ದಿಲ್ಲಿಯ ‘ಆಡ್ ಕ್ರಾಪ್ಟ್’ ಗೆ ಕೆಲಸಕ್ಕೆ ಸೇರಿಕೊಂಡರು. ಎರಡೇ ವರ್ಷಗಳಲ್ಲಿ ಹೈದ್ರಾಬಾದ್ ನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ತಲೆ ಎತ್ತಿತು. ಮಾರ್ಗದರ್ಶಿ ಆರಂಭಿಸಿದರೆ ಸಾಲದು ಅದನ್ನು ಜಾಹೀರೂ ಮಾಡಬೇಕು ಅನಿಸಿದ್ದೇ ತಡ ತಮ್ಮ ಮಗನ ಹೆಸರನ್ನು ಹೊತ್ತ ಕಿರಣ್ ಆಡ್ಸ್ ಆರಂಭಿಸಿಯೇ ಬಿಟ್ಟರು. ಮಾರ್ಗದರ್ಶಿಯ ಎರಡನೇ ಬ್ರಾಂಡ್ ಆರಂಭಿಸಲು ರಾಮೋಜಿರಾವ್ ವಿಶಾಖಪಟ್ಟಣಕ್ಕೆ ಕಾಲಿಟ್ಟದ್ದೇ ಇಟ್ಟದ್ದು ರಾಮೋಜಿರಾಯರು ಆಂಧ್ರಪ್ರದೇಶವನ್ನೇ ಬದಲಿಸಿ ಹಾಕಿದರು. ಮೀಡಿಯಾದ ನಕಾಶೆ ಬದಲಿಸಿದರು. ಇಡೀ ಜಗತ್ತು ಒಂದು ಹಳ್ಳಿ ಎನ್ನುವ ಕಾಲ ಬರುವ ಸಾಕಷ್ಟು ಮುಂಚೆಯೇ ಇಡೀ ಆಂಧ್ರವೇ ಒಂದು ಹಳ್ಳಿ ಎನ್ನುವಂತೆ ತಮ್ಮ ಮೀಡಿಯಾಗಳ ಮೂಲಕ ಮಾಡಿದರು.

ವಿಶಾಖಪಟ್ಟಣಕ್ಕೆ ಮಾರ್ಗದರ್ಶಿ ಆರಂಭಿಸಲು ರಾಮೋಜಿರಾಯರು ಬಂದಾಗ ಉಳಿದುಕೊಳ್ಳಲು ಒಂದು ಸರಿಯಾದ ಹೋಟೆಲ್ ಸಹಾ ಇರಲಿಲ್ಲ. ರಾಮೋಜಿರಾಯರಿಗೆ ‘ಬಿಟ್ಟ ಸ್ಥಳ’ ಎಲ್ಲಿದೆ ಎಂಬುದು ತಕ್ಷಣ ಗೊತ್ತಾಗುತ್ತಿತ್ತು. ಮರುಕ್ಷಣವೇ ಅದನ್ನು ತುಂಬುತ್ತಿದ್ದರು. ವಿಶಾಖಪಟ್ಟಣದಲ್ಲಿ ‘ಡಾಲ್ಫಿನ್’ ಹೋಟೆಲ್ ತಲೆ ಎತ್ತಿತು. ಪ್ರತೀ ಬಾರಿ ಅಲ್ಲಿಗೆ ಹೋದಾಗ ರಾಮೋಜಿರಾಯರಿಗೆ ಕಾಡುತ್ತಿದ್ದುದು ಬೆಳಗ್ಗೆ ಎದ್ದ ತಕ್ಷಣ ಓದಲು ಪೇಪರ್ ಸಿಗುವುದಿಲ್ಲ ಎನ್ನುವ ಅಸಹನೆ. ಆ ಕಾಲಕ್ಕೆ ಇಂಡಿಯನ್ ಎಕ್ಸ್ ಪ್ರೆಸ್ ಬಳಗದ ಪತ್ರಿಕೆ ಪೋಸ್ಟ್ ಮೂಲಕ ಮಾರನೆಯ ದಿನ ವಿಶಾಖಪಟ್ಟಣಕ್ಕೆ ಬರುತ್ತಿತ್ತು. ವಿಶಾಖಪಟ್ಟಣದ ಮಟ್ಟಿಗೆ ಜಗತ್ತೇ ಒಂದು ದಿನ ತಡವಾಗಿ ಅರಳುತ್ತಿತ್ತು. ಸಾಕು ಸಾಕಾದ ರಾಮೋಜಿರಾಯರು ಎಕ್ಸ್ ಪ್ರೆಸ್ ಮಾಲೀಕರಿಗೆ ವಿಶಾಖಪಟ್ಟಣ ಎಡಿಷನ್ ತನ್ನಿ ಎಂದು ವಿವರಿಸಿದರು. ಅವರಿಗೆ ಅರ್ಥವಾಗಲೇ ಇಲ್ಲ. ರಾಮೋಜಿರಾಯರಿಗೆ ಅಲ್ಲಿಯೂ ‘ಬಿಟ್ಟ ಸ್ಥಳ’ ಕಂಡಿತು. ‘ಈನಾಡು’ ಮೂಲಕ ಅದನ್ನು ತುಂಬಿಯೂ ಬಿಟ್ಟರು. ‘ಈ ನಾಡು’ ಎಂದರೆ ಈ ದಿನ ಅಂತ ಅರ್ಥ. ‘ಈ ನಾಡು’ವಿಗೆ ಆ ಹೆಸರಿಡಲು ರಾಮೋಜಿರಾಯರಿಗೆ ಇದ್ದ ಕಾರಣ ಈ ದಿನದ್ದನ್ನು ಈ ದಿನವೇ ಓದಬೇಕು ಎನ್ನುವ ಹಂಬಲ. ಆರಂಭದಲ್ಲಿ ಇಡೀ ವಾರ ಮೂರು ಸಾವಿರ ಪ್ರತಿ ಮಾರಾಟವಾಗಲು  ಹೆಣಗುತ್ತಿದ್ದ ಈ ನಾಡು ಇಂದು ಅತ್ಯಂತ ಹೆಚ್ಚು ಓದುಗರನ್ನು ಪಡೆದ ಟಾಪ್ ಟೆನ್ ಪತ್ರಿಕೆಗಳಲ್ಲಿ ಒಂದು.

ಒಮ್ಮೆ ಹೀಗೆಯೇ ಮಾತನಾಡುತ್ತಾ ಕುಳಿತಾಗ ‘ ಅನ್ನದಾತ ಬಗ್ಗೆ ನಿಮಗೆ ಯಾಕಿಷ್ಟು ಒಲವು?’ ಅಂತ ಕೇಳಿದೆ. ಅನ್ನದಾತ ಇಲ್ಲದೆ ರಾಮೋಜಿರಾಯರನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅನ್ನದಾತ ಪತ್ರಿಕೆ, ಅನ್ನದಾತ ಕ್ಯಾಲೆಂಡರ್, ಅನ್ನದಾತ ಸಿ.ಡಿ … ಹೀಗೆ ಕೃಷಿ ಎನ್ನುವುದು ಅವರ ದಿನನಿತ್ಯದ ಉಸಿರು. ಮಾರ್ಗದರ್ಶಿ ಚಿಟ್ ಫಂಡ್ ಗೆ ಕೊಡುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದು, ವಿದೇಶಿಯರೂ ಬಂದು ಮುಕುರುವ ರಾಮೋಜಿ ಫಿಲಂ ಸಿಟಿಗೆ ನೀಡುವ ಮಹತ್ವ ಅರ್ಥ ಮಾಡಿಕೊಳ್ಳಬಹುದು, ಈಟಿವಿ ಚಾನೆಲ್ ಗಳಿಗೆ- ಈ ನಾಡುವಿಗೆ ಕೊಡುವ ಇಂಪಾರ್ಟೆನ್ಸ್ ಗೊತ್ತಾಗಿ ಹೋಗುತ್ತದೆ. ಆದರೆ ‘ಅನ್ನದಾತ’ಕ್ಕೆ…? ಹಾಗಾಗಿಯೇ ಈ ಪ್ರಶ್ನೆ ಕೇಳಿದ್ದೆ.

ರಾಮೋಜಿರಾವ್ ಅವರು ತಮ್ಮ ಕನಸು ಬೆನ್ನತ್ತುವ ನಿಟ್ಟಿನಲ್ಲಿ ತಮ್ಮ ಜಮೀನೆಲ್ಲಾ ಮಾರಿದರು. ತಮ್ಮ ತಲೆತಲಾಂತರದಿಂದ ಬಂದ ಜಮೀನು ಇಲ್ಲವಾಗಿ ಹೋಗಿತ್ತು. ಕೃಷಿಕ ಕುಟುಂಬದಿಂದ ಬಂದ ತಾವು ಈಗ ಮಾಡುತ್ತಿರುವ ಉದ್ಯಮದ ಮೂಲಕವೇ ಕೃಷಿಕರಿಗೆ ಏನಾದರೂ ಹಿಂದಿರುಗಿಸಿ ಕೊಡಬೇಕು ಎಂದಾಗ ಹುಟ್ಟಿದ್ದು ‘ಅನ್ನದಾತ’. ಯಾವುದೋ ಚಾನೆಲ್ ನಲ್ಲಿ ಕೃಷಿ ಕಾರ್ಯಕ್ರಮ ಎನ್ನುವುದು ಹತ್ತರಲ್ಲಿ ಹನ್ನೊಂದು. ಆದರೆ ಈಟಿವಿಯ ಮಟ್ಟಿಗಂತು ಇದು ಹತ್ತರಲ್ಲಿ ಮೊದಲನೆಯ ಒಂದು. ಒಂದು ದೊಡ್ಡ ಪಡೆಯೇ ಅನ್ನದಾತನ ಹಿಂದಿದೆ. ಆಮೇಲೆ ಉಷಾಕಿರಣ ಮೂವೀಸ್, ಮಯೂರಿ ಆಡಿಯೋ , ಈಟಿವಿ ಚಾನೆಲ್ ಕಥೆ ದೊಡ್ಡದು.

ಈ ಅನ್ನದಾತನ ಜತೆ ಮತ್ತೆ ಮತ್ತೆ ಮಾತನಾಡಿ ಪಡೆದದ್ದೆಲ್ಲಾ ನನ್ನ ಮನಸ್ಸಿನೊಳಗೆ ಬಲವಾಗಿ ದಾಖಲಾಗಿದೆ. ಆದರೂ ಒಂದು ಆತ್ಮ ಚರಿತ್ರೆ ಇದ್ದಿದ್ದರೆ ಅನಿಸಿತ್ತು. ಕನಿಷ್ಠ ಅವರ ಬಗ್ಗೆ ಇರುವ ಮಾಹಿತಿಯನ್ನೆಲ್ಲಾ ಒಂದೆಡೆ ಸೇರಿಸಿಬಿಡೋಣ ಅಂತ ಕೂತೆ. ಗೂಗಲ್ ನಲ್ಲಿ ರಾಮೋಜಿರಾಯರ ಹೆಸರು ಒತ್ತಿದ್ದೇ ತಡ ನೂರಾರು ಮಾಹಿತಿಗಳು ಹೊರಬಿತ್ತು. ಇಡೀ ದಿನಕ್ಕೆ ಆಗುವಷ್ಟು ಓದು ಸಿಕ್ಕಿತಲ್ಲಾ ಎಂದು ಒಂದೊಂದೇ ಪುಟ ಮಗುಚುತ್ತಾ ಹೋದೆ. ಅಲ್ಲಿದ್ದದ್ದು ಮತ್ತೆ ಅದೇ ಮಾರ್ಗದರ್ಶಿ ಅಪಸ್ವರ. ವೈಎಸ್ ಆರ್- ಜಗನ್ – ರಾಮೋಜಿರಾಯರ ನಡುವಿನ ವಿರಸ, ಈ ನಾಡು- ಸಾಕ್ಷಿ ಯುದ್ಧ, ಅದರಾಚೆಗೆ ಏನೂ ಇರಲಿಲ್ಲ. ಮ್ಯಾನೇಜ್ಮೆಂಟ್ ಕಂಪನಿಯೊಂದು ತಯಾರಿಸಿದ ಒಂದು ಅಧ್ಯಯನವೇ ಒಂದಿಷ್ಟು ರಾಮೋಜಿರಾಯರ ಚಿತ್ರವನ್ನು ಸರಿಯಾಗಿ ಕಟ್ಟಿಕೊಟ್ಟಿತ್ತು.

ಇಂದು ಎಷ್ಟೋ ಮೀಡಿಯಾ ಸಂಸ್ಥೆಗಳ ಮೀಡಿಯಾ ಪ್ರಮುಖರ ಮಾಹಿತಿಗಳು ಸದ್ದಿಲ್ಲದೆ ಕತ್ತಲಲ್ಲೇ ಉಳಿದು ಹೋಗುತ್ತಿದೆಯಲ್ಲಾ ಅನಿಸಿತು. ಆ ವೇಳೆಗೆ ಸರಿಯಾಗಿ ಫಿಲಂ ಸಿಟಿಯಿಂದ ಜಗದೀಶ ಮಣಿಯಾಣಿ ಫೋನ್ ಮಾಡಿದರು. ಈಟಿವಿ ಕನ್ನಡಕ್ಕೆ ಹತ್ತು ವರ್ಷ ಆಯ್ತು ಅಂದರು. ಅವರ ದನಿಯಲ್ಲಿ ಸಂಭ್ರಮವಿತ್ತು. ಅಂತಹ ಸಂಭ್ರಮವನ್ನು ಸಾಕಷ್ಟು ಜನರಿಗೆ ಹಂಚಿದ ರಾಮೋಜಿ ರಾವ್ ಮತ್ತೆ ನೆನಪಾದರು.

-ಜಿ ಎನ್ ಮೋಹನ್

key words: Telugu, icon, ramojirao, article, Kannada, e-tv news channel

 

Next Article